ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ತೈಲ ದರ ಏರಿಕೆ ಖಂಡಿಸಿ ಬಿಜೆಪಿಯಿಂದ (BJP) ಪ್ರತಿಭಟನೆ ನಡೆದಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದಲ್ಲಿನ ಬಿಜೆಪಿ ಕಚೇರಿಯಿಂದ ವಿಧಾನಸೌಧದ ವರೆಗೆ ನಾಯಕರು ಸೈಕಲ್ ಜಾಥಾ (Cycle Jatha) ನಡೆಸಿದರು. ಅವಕಾಶ ಮಾಡಿಕೊಡದ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸೈಕಲ್ ಏರಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ನಾಯಕರು ಮುಂದಾದರು. ಆದರೆ ಬಿಜೆಪಿ ಕಚೇರಿ ಮುಂಭಾಗದಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.
ಸೈಕಲ್ ಜಾಥಾ ತಡೆಗೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನೆಗೆ 150 ಸೈಕಲ್ಗಳನ್ನು ಬಿಜೆಪಿ ನಾಯಕರು ಬಾಡಿಗೆಗೆ ತಂದಿದ್ದರು. ಸಿಲ್ಕ್ ಬೋರ್ಡ್ ಬಳಿ ಇರುವ ‘ಸೈಕಲ್ ಟು ಗೋ’ ಸಂಸ್ಥೆಯಿಂದ ಸೈಕಲ್ಗಳನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಪ್ರತಿಭಟನಾಕಾರರನ್ನು ಬಿಜೆಪಿ ಕಚೇರಿ ದಾಟದಂತೆ ಪೊಲೀಸರು ತಡೆದರು.
ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕರಾದ ಅಶ್ವಥ್ ನಾರಾಯಣ್, ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಇದ್ದರು.