ಬೆಳಗಾವಿ: ಕೊಲ್ಲಾಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ತಾಳಿದ್ದರಿಂದಾಗಿ ರಾಜ್ಯದ ಬೆಳಗಾವಿಯಲ್ಲಿ ಕೂಡ ಹೈ ಅಲರ್ಟ್ ಘೋಷಿಸಲಾಗಿದೆ.
ಟಿಪ್ಪು ಸುಲ್ತಾನ್ (Tipu Sultan), ಔರಂಗಜೇಬ್‌ನನ್ನು(Aurangzeb) ಕುರಿತು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತಿಭಟನೆ ನಡೆದಿತ್ತು. ಇದು ಹಿಂಸಾರೂಪ(Kolhapur Violence) ಪಡೆದಿದೆ. ಹೀಗಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೂಡ ಅಲರ್ಟ್ ಘೋಷಿಸಲಾಗಿದೆ.
ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ದೀಪಕ್ ಕೇಸರಕರ್ ನೇತೃತ್ವದಲ್ಲಿ ಶಾಂತಿ ಸಭೆ ಕೂಡ ನಡೆಯಿತು. ಅಲ್ಲಿ ಜೂನ್ 19ರವರೆಗೆ ನಿಷೇಧಾಜ್ಞೆ ಘೋಷಿಸಲಾಗಿದೆ. ಈ ಕುರಿತು ಅಲ್ಲಿಯ ಜಿಲ್ಲಾಧಿಕಾರಿ ಭಗವಾನ್ ಕಾಂಬಳೆ ಆದೇಶ ಹೊರಡಿಸಿದ್ದಾರೆ. ಕೊಲ್ಲಾಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಔರಂಗಜೇಬನ ವೈಭವೀಕರಿಸಿದ ವಾಟ್ಸಪ್ ಸ್ಟೇಟಸ್ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ವೇಳೆ ಹಿಂಸಾಚಾರ ನಡೆದಿದೆ. ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದ್ದು ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಕೊಲ್ಲಾಪುರದ ಛತ್ರಪತಿ ಶಿವಾಜಿ ಮಹಾರಾಜ ಚೌಕ್‌ನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಹೀಗಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.