ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಧ್ಯೆ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದ ನಡೆಯುತ್ತಿದ್ದ ಸಂದರ್ಭದಲ್ಲಿ ಮೈದಾನದೊಳಗೆ ಪ್ರತಿಭಟನಾಕಾರರು ನುಗ್ಗಿ ಅವಾಂತರ ಸೃಷ್ಟಿಸಿರುವ ಘಟನೆ ನಡೆದಿದೆ.
ಜಸ್ಟ್ ಸ್ಟಾಪ್ ಆಯಿಲ್ ಸಂಘಟನೆಯ ಇಬ್ಬರು ಪ್ರತಿಭಟನಾಕಾರರು ಪಂದ್ಯ ಆರಂಭವಾಗುತ್ತಿದ್ದಂತೆ ಮೈದಾನಕ್ಕೆ ನುಗ್ಗಿದ್ದಾರೆ. ಮೈದಾನದಲ್ಲಿ ಆರೆಂಜ್ ಬಣ್ಣ ಎರಚುವ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜಾನಿ ಬೈರ್ಸ್ಟೋವ್ ಪ್ರತಿಭಟನಾಕಾರೊಬ್ಬರನ್ನು ಎತ್ತಿಕೊಂಡು ಮೈದಾನದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾಗಿದ್ದ ಭದ್ರತಾ ಸಿಬ್ಬಂದಿಗಳು ಮತ್ತೋರ್ವ ಪ್ರತಿಭಟನಾಕಾರನನ್ನು ವಶಕ್ಕೆ ಪಡೆದಿದ್ದಾರೆ. ಆ ನಂತರ ಮೈದಾನದಲ್ಲಿನ ಬಣ್ಣಗಳನ್ನು ತೆರವುಗೊಳಿಸಿ ಪಂದ್ಯವನ್ನು ಮುಂದುವರೆಸಲಾಯಿತು. ಸದ್ಯ ಪ್ರತಿಭಟನಾಕಾರರು ನುಗ್ಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಜಾನಿ ಬೈರ್ಸ್ಟೋವ್ ಪ್ರತಿಭಟನಾಕಾರನೊಬ್ಬನನ್ನು ಏಕಾಂಗಿಯಾಗಿ ಎತ್ತಿಕೊಂಡು ಹೋಗುತ್ತಿರುವ ಫೋಟೋ ಇಂಟರ್ನೆಟ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಜಸ್ಟ್ ಸ್ಟಾಪ್ ಆಯಿಲ್ ಯುನೈಟೆಡ್ ಕಿಂಗ್‌ಡಮ್‌ನ ಪರಿಸರವಾದಿಗಳ ಸಂಘಟನೆಯಿಂದ ತೈಲ ಮತ್ತು ಇತರ ಪಳೆಯುಳಿಕೆ ಇಂಧನಗಳ ಪರಿಶೋಧನೆಗಾಗಿ ಸರ್ಕಾರವು ಹೊಸ ಪರವಾನಗಿಗಳನ್ನು ನಿಲ್ಲಿಸಬೇಕೆಂದು ಪ್ರತಿಭಟನೆ ನಡೆಸುತ್ತಿದೆ. ಇದರ ಭಾಗವಾಗಿ ಕ್ರೀಡಾಂಕಣಕ್ಕೆ ಪ್ರತಿಭಟನಾಕಾರರು ನುಗ್ಗಿದ್ದಾರೆ.








