ಚಂದನವನದ ಒಳಿತಿಗಾಗಿ ಆ. 13 ಹಾಗೂ 14ರಂದು ಸಿನಿಮಾ ರಂಗದ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಸಿದ್ಧತೆ ಕಾರ್ಯ ನಡೆದಿದೆ.
ಈ ಪೂಜೆಯಲ್ಲಿ ಇಡೀ ಸಿನಿಮಾ ರಂಗ ಭಾಗಿಯಾಗಲಿದೆ. ಎಲ್ಲ ಕಲಾವಿದರನ್ನು ಪೂಜೆಗೆ ಆಹ್ವಾನಿಸಲಾಗಿದೆ. ಆದರೆ, ಈ ಪೂಜೆ ಹಮ್ಮಿಕೊಂಡಿದ್ದಕ್ಕೆ ಹಲವರು ದರ್ಶನ್ (Darshan) ಗಾಗಿ ಪೂಜೆ ನಡೆಯುತ್ತಿದೆ ಅಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ರಾಕ್ ಲೈನ್ ವೆಂಕೇಶ್ (Rock Line Venkatesh) ಹಾಗೂ ನಟ ದೊಡ್ಡಣ್ಣ ಇದು ಸುಳ್ಳು ಎಂದು ಹೇಳಿದ್ದಾರೆ.
ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಚಿತ್ರರಂಗದ ಒಳಿತಿಗಾಗಿ ಈ ಪೂಜೆ ನಡೆಸಲಾಗುತ್ತಿದೆ. ದರ್ಶನ್ ಗಾಗಿ ಈ ಪೂಜೆ ಮಾಡುತ್ತಿಲ್ಲ. ಅವರಿಗಾಗಿ ಪೂಜೆ ಮಾಡಬೇಕು ಅಂದ್ರೆ ನೂರು ಪೂಜೆ ಮಾಡಿಸುತ್ತೇನೆ. ಇಲ್ಲಿಯೇ ಮಾಡಿಸುವ ಅವಶ್ಯಕತೆ ಇಲ್ಲ. ಸ್ನೇಹಿತರಾಗಿ ಘಟನೆ ಬಗ್ಗೆ ನನಗೂ ವಿಷಾದವಿದೆ. ಆದರೆ, ಅವರಿಗಾಗಿ ಮಾತ್ರ ಈ ಪೂಜೆ ಮಾಡುತ್ತಿಲ್ಲ. ಈ ಪೂಜೆ ಕನ್ನಡ ಚಿತ್ರರಂಗ ಬೆಳೆಯಲಿ ಎಂಬ ಕಾರಣಕ್ಕೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಚಿತ್ರೋದ್ಯಮದ ಏಳ್ಗೆಗೆ ಹೋಮ ನಡೆಯುತ್ತಿದೆ. ಕೊರೊನಾ ಕಡಿಮೆಯಾದ ನಂತರವೇ ಮಾಡಬೇಕು ಅಂತ ಅಂದುಕೊಳ್ಳಲಾಗಿತ್ತು. ಆದರೆ, ಈ ತಿಂಗಳು 14ಕ್ಕೆ ಒಳ್ಳೆಯ ದಿನ ಇದೆ. ಹೀಗಾಗಿ ಇಡೀ ಚಿತ್ರರಂಗದ ಉಳಿವಿಗಾಗಿ ಈ ಹೋಮ ಹಾಗೂ ಪೂಜೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಬೇರೆ ಭಾಷೆಯ ಸೂಪರ್ ಡೂಪರ್ ಹಿಟ್ ಸಿನಿಮಾನ ಕನ್ನಡಕ್ಕೆ ಡಬ್ ಮಾಡಲಾಗುತಿದೆ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಈ ಧ್ವನಿ ಇದೆ. ಹಲವರು ಸಿನಿಮಾ ರಂಗವನ್ನೇ ನಂಬಿಕೊಂಡಿದ್ದಾರೆ. ಅವರಿಗಾಗಿ ನಾವು ಹೋರಾಟ ಮಾಡಬೇಕಿದೆ ಎಂದು ಹೇಳಿದ್ದಾರೆ.