ಪುಷ್ಪಾ 2: ಮಾಸ್ ಅಂದಾಜು, ಕ್ಲಾಸ್ ಪ್ರೆಸೆಂಟೇಷನ್!
ಪುಷ್ಪ 2: ದಿ ರೂಲ್ ಭಾರೀ ನಿರೀಕ್ಷೆಯ ಸಿನಿಮಾ ‘ಪುಷ್ಪ-2 ದಿ ರೂಲ್’ ಡಿಸೆಂಬರ್ 5ರಂದು ಅದ್ದೂರಿಯಾಗಿ ಬಿಡುಗಡೆಗೊಂಡು ಭಾರೀ ನಿರೀಕ್ಷೆಗಳನ್ನು ಮೂಡಿಸಿದೆ. ಇದು ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಭಾರತೀಯ ಸಿನೆಮಾದ ಮತ್ತೊಂದು ಮೆಗಾಹಿಟ್ ಆಗಿ ಹೊರಹೊಮ್ಮಲಿದೆ ಎಂದು ಊಹಿಸಲಾಗಿದೆ. ಮೊದಲ ಭಾಗದ ಯಶಸ್ಸಿನ ನಂತರ ಎರಡನೇ ಭಾಗವೂ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದ್ದು, ಟ್ರೇಲರ್ಗಳು ಮತ್ತು ಪ್ರಚಾರ ಕಾರ್ಯಕ್ರಮಗಳು ಬೃಹತ್ ಯಶಸ್ಸು ಸಾಧಿಸಿದ್ದರಿಂದ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ಪುಷ್ಪ-2 ಸಿನಿಮಾ ವು ಭಾರತದಲ್ಲಿ 8,000 ಸ್ಕ್ರೀನ್ಗಳು ಮತ್ತು ವಿದೇಶಗಳಲ್ಲಿ 4,000 ಸ್ಕ್ರೀನ್ಗಳಲ್ಲಿ, ಒಟ್ಟು 12,000 ಸ್ಕ್ರೀನ್ಗಳಲ್ಲಿ ಬಿಡುಗಡೆಗೊಂಡಿದೆ, ಇದು ಭಾರತೀಯ ಸಿನಿಮಾದಲ್ಲಿ ದೊಡ್ಡ ದಾಖಲೆ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಡಿಜಿಟಲ್ ಮತ್ತು ಸ್ಯಾಟೆಲೈಟ್ ಹಕ್ಕುಗಳಿಂದ 1000 ಕೋಟಿ ರೂಪಾಯಿ ಗಳಿಸಿದೆ.
ಪುಷ್ಪ 2 ಪ್ರೇಕ್ಷಕರಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದ್ದು, ಅಲ್ಲು ಅರ್ಜುನ್ ಅವರ ನಟನೆಯು ಮತ್ತೊಮ್ಮೆ ಕೌತುಕ ಮೂಡಿಸಿದೆ. ಮೊದಲ ಭಾಗದಲ್ಲಿ ಪುಷ್ಪಾ ರಾಜನ ನಟನೆ ಮತ್ತು ಹೋರಾಟವನ್ನು ಚಿತ್ರೀಕರಿಸಿದರೆ, ಈ ಭಾಗದಲ್ಲಿ ಕೋಟ್ಯಧಿಪತಿ ಪುಷ್ಪ ಈಗ ಹೇಗೆ ಬದಲಾಗಿದ್ದಾನೆ? ಅವನ ಶತ್ರುಗಳು ಸಂಖ್ಯೆ ಎಷ್ಟು ಹೆಚ್ಚಿದೆ ಅನ್ನೊ ಕಥಾಹಂದರ ಹೊಂದಿದೆ
ಅಲ್ಲು ಅರ್ಜುನ್ ಅವರ ನಟನೆ ಮತ್ತು ಪರ್ಫಾರ್ಮೆನ್ಸ್ ಸಿನಿಮಾದ ಮುಖ್ಯ ಆಕರ್ಷಣೆ. ಅಲ್ಲು ಅರ್ಜುನ್ ಅವರ “ಮಾಸ್” ಮತ್ತು “ಕ್ಲಾಸ್” ಅಭಿನಯ ಮತ್ತೆ ಗಮನ ಸೆಳೆಯುತ್ತದೆ. ಅವರ ಬಾಡಿ ಲಾಂಗ್ವೇಜ್ ಮತ್ತು ಡೈಲಾಗ್ ಡೆಲಿವರಿ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.
ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಕೂಡ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಪಾತ್ರದಲ್ಲಿ ಮತ್ತಷ್ಟು ಪ್ರೌಢತೆ ಕಾಣಬಹುದು, ಮತ್ತು ಫಹಾದ್ ಫಾಸಿಲ್ ತಮ್ಮ ವಿಲನ್ ಪಾತ್ರದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಜಾಲಿ ರೆಡ್ಡಿ ಪಾತ್ರದ ಮೂಲಕ ಡಾಲಿ ಧನಂಜಯ ಚಿತ್ರಕ್ಕೆ ವಿಶೇಷ ಮೆರುಗು ನೀಡುತ್ತಾರೆ ಎಂಬುದು ಪುಷ್ಪ 2 ಪ್ರೇಕ್ಷಕರಲ್ಲಿ ದೊಡ್ಡ ನಿರೀಕ್ಷೆ ಇತ್ತು ಅವರ ಎಂಟ್ರಿಗೆ ಇನ್ನಷ್ಟು ಥ್ರಿಲ್ ತರಲು ನಿರ್ದೇಶಕರು ವೈಶಿಷ್ಟ್ಯಪೂರ್ಣ ದೃಶ್ಯಾವಳಿ ಸಿದ್ಧಪಡಿಸಿದ್ದಾರೆ.
ಸಾಹಸ ದೃಶ್ಯಗಳು ಹಾಲಿವುಡ್ ಮಟ್ಟದಲ್ಲಿ ಚಿತ್ರೀಕರಿಸಲ್ಪಟ್ಟಿವೆ. ಛಾಯಾಗ್ರಹಣವು ಕತ್ತಲು ಮತ್ತು ಪ್ರಕೃತಿಯ ನಡುವೆ ಸಂಭಾಷಣೆ ಮಾಡಿಕೊಂಡಂತಿದೆ. ದೇವಿ ಶ್ರೀ ಪ್ರಸಾದ್ ಅವರು ಮತ್ತೆ ತಮ್ಮ ಜಾದು ಮೆರೆದಿದ್ದು, ಸಿನಿಮಾಗೆ ಹೊಸ ಜೀವ ತುಂಬಿದ್ದಾರೆ.
ಪುಷ್ಪಾ 1 ನಲ್ಲಿ ನಿರ್ದೇಶಕ ಸುಕುಮಾರ್ ಅವರು ಪುಷ್ಪಾ ರಾಜನ ಹಿನ್ನೆಲೆ ಮತ್ತು ಆತನ ಪಯಣದ ಮೊದಲ ಭಾಗವನ್ನು ನಿಖರವಾಗಿ ತೋರಿಸಿದ್ದರು.
ಆದರೆ “ಪುಷ್ಪಾ 2: ದಿ ರೂಲ್”ನಲ್ಲಿ, ಕಥೆ ಬೇರೆಬೇರೆ ಅಂಶಗಳನ್ನು ಒಳಗೊಂಡಂತೆ ಆಳವಾಗಿ ಹೋಗುತ್ತಿದ್ದು, ನಿರೂಪಣೆಯಲ್ಲಿ ಸ್ವಲ್ಪ ಗೊಂದಲ ಉಂಟಾಗಿರುವಂತೆ ಕಾಣುತ್ತದೆ. ಇದು ಪ್ರೇಕ್ಷಕರಿಗೆ ಪ್ಲಾಟ್ ಕಡಿಮೆ ಹಿಡಿತ ಹೊಂದಿದಂತೆ ತೋರುತ್ತದೆ. ಕೆಲವು ಪ್ರೇಕ್ಷಕರು ಮತ್ತು ವಿಮರ್ಶಕರು, ಪುಷ್ಪಾ -2 ಛಾಯಾಗ್ರಹಣ ಮತ್ತು ಸಾಹಸ ದೃಶ್ಯಗಳ ಅತಿರೇಕಕ್ಕೆ ಹೆಚ್ಚು ಒತ್ತು ನೀಡಿದೆ ಇದು ಮಾಸ್ ಪ್ರೇಕ್ಷಕರನ್ನು ತೃಪ್ತಿಪಡಿಸಬಹುದು, ಆದರೆ ಕಥಾಹಂದರದ ದಾರಿಯನ್ನು ನಿರೀಕ್ಷಿಸಿದಂತೆ ನೇರವಾಗಿ ಮುಂದುವರಿಸುತ್ತಿಲ್ಲ ಎಂಬ ಭಾವನೆ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪುಷ್ಪಾ ಭಾಗ 2, ಅಂತ್ಯದಲ್ಲಿ ಈ ಕಥೆ ಇನ್ನೂ ಮುಗಿದಿಲ್ಲ ಎಂಬ ಸಂದೇಶವನ್ನು ಸ್ಪಷ್ಟಗೊಳಿಸುತ್ತದೆ. ಈ ಬಾರಿ ಸುಕುಮಾರ್ ಅವರು ಕಥೆಯನ್ನು ಬಿಚ್ಚಿಡುವುದನ್ನು ಬಿಟ್ಟು, ಮುಂದಿನ ಭಾಗಕ್ಕಾಗಿ ಕುತೂಹಲವನ್ನು ಉಳಿಸಲು ಹೆಚ್ಚಿನ ಪ್ರಯತ್ನ ಮಾಡಿದ್ದಾರೆ. ಪ್ರೇಕ್ಷಕರಿಗೆ ‘ಪುಷ್ಪ ಯುದ್ಧ’ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮುಂದುವರಿಯುವುದರ ಸುಳಿವು ಕೊಟ್ಟಿದ್ದಾರೆ.
ಪುಷ್ಪ 3 ಕುರಿತು ಅಧಿಕೃತ ಘೋಷಣೆ ಇನ್ನೂ ಬಾರದಿದ್ದರೂ, ಇದರ ಬಗ್ಗೆ ಅಭಿಮಾನಿಗಳು ಈಗಾಗಲೇ ಚರ್ಚೆ ಮಾಡುತ್ತಿದ್ದಾರೆ. ಸುಕುಮಾರ್ ಅವರ ನಿರೂಪಣಾ ಶೈಲಿಯಿಂದ, ಮುಂದಿನ ಭಾಗದಲ್ಲಿ ಇನ್ನಷ್ಟು ಅದ್ಭುತತೆಯನ್ನು ನಿರೀಕ್ಷಿಸಬಹುದಾಗಿದೆ.