ಲಕ್ನೋ: ಕೈ, ಕಾಲು ಕಟ್ಟಿ ಮಹಿಳೆಗೆ ಥಳಿಸಿದ್ದಲ್ಲದೇ, ಬಾಯಿಗೆ ಕೀಟನಾಶಕ ಸುರಿದಿರುವ ಘಟನೆ ನಡೆದಿದೆ.
ಪತಿ, ಮಾವ ಸೇರಿದಂತೆ ಕುಟುಂಬಸ್ಥರು ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಉತ್ತರಪ್ರದೇಶದ (Uttarpradesh) ಹಾಪುರ ಜಿಲ್ಲೆಯಲ್ಲಿ ನಡೆದಿದೆ.
ಪತಿ ಮತ್ತು ಮಾವ ಮಹಿಳೆಗೆ ಥಳಿಸಿದ್ದಲ್ಲದೆ, ಆಕೆಯನ್ನು ಕೊಲ್ಲುವ ಉದ್ದೇಶದಿಂದ ಕೀಟನಾಶಕ ಸುರಿದಿದ್ದಾರೆ. ಆಗ ಸಹೋದರ ವಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆತನಿಗೂ ಥಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಗದ್‌ಪುರ ಗ್ರಾಮದ ನಿವಾಸಿ ಶೀಲಾ ಅವರು ಗಜ್ರೌಲಾ ಪೊಲೀಸ್ ಠಾಣಾ ವ್ಯಾಪ್ತಿಯ ಫಿರೋಜ್‌ಪುರ ಗ್ರಾಮದ ಸುರೇಂದ್ರ ಎಂಬಾತನನ್ನು ವಿವಾಹವಾಗಿದ್ದರು. ಆದರೆ, ಮಹಿಳೆಯ ಮೇಲೆ ಕುಟುಂಬಸ್ಥರು ಆಗಾಗ ಹಲ್ಲೆ ನಡೆಸುತ್ತಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಸಹೋದರ ಮನೆಗೆ ಬಂದಿದ್ದಾರೆ. ಆ ವೇಳೆ ಸಹೋದರನ ಮುಂದೆಯೇ ಪತಿ ಮತ್ತು ಮಾವ ಸೇರಿ ಆಕೆಯ ಕೈಕಾಲು ಕಟ್ಟಿ ಥಳಿಸಿದ್ದಾರೆ. ಆಗ ಸಹೋದರ ತಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸಹೋದರನ ಸಮ್ಮುಖದಲ್ಲಿಯೇ ಆರೋಪಿಗಳಿಬ್ಬರೂ ಕೀಟನಾಶಕವನ್ನು ಆಕೆಯ ಬಾಯಿಗೆ ಬಲವಂತವಾಗಿ ಸುರಿದಿದ್ದಾರೆ. ಪರಿಣಾಮ ಆಕೆಯ ಸ್ಥಿತಿ ಗಂಭೀರವಾಗಿದೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.