ಬೆಂಗಳೂರು: ಕೊನೆಗೂ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿದ್ದು, ಆರ್ ಅಶೋಕ್ (R Ashok) ನೇಮಕವಾಗಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಹೆಸರು ಘೋಷಿಸಲಾಗಿದೆ. ಅಶೋಕ್ ಹೆಸರಿಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಸೂಚನೆ ಕೊಟ್ಟರೆ, ಶಾಸಕ ಸುನಿಲ್ ಕುಮಾರ್ (Sunil Kumar) ಅನುಮೋದನೆ ನೀಡಿದ್ದಾರೆ. ಯತ್ನಾಳ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೀಕ್ಷಕರ ಮುಂದೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದು ಆಯ್ಕೆಗೂ ಮುನ್ನ ಆರ್ ಅಶೋಕ್ ಹೇಳಿದ್ದರು.
ಹಿರಿಯ ನಾಯಕರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸಭೆಯಿಂದ ಹೊರ ನಡೆದಿದ್ದಾರೆ. ಹೈಕಮಾಂಡ್ ನಿಲುವು ಘೋಷಣೆಯಾಗುತ್ತಿದ್ದಂತೆ ಆಮೇಲೆ ಮಾತಾಡ್ತೀವಿ ಎಂದು ಹೊರ ನಡೆದ ಯತ್ನಾಳ್‍ಗೆ ರಮೇಶ್ ಜಾರಕಿಹೊಳಿಯೂ ಸಾಥ್ ಕೊಟ್ಟಿದ್ದಾರೆ.
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು. ಬ್ಲಾಕ್‍ಮೇಲ್ ತಂತ್ರಗಳಿಗೆ ಹೈಕಮಾಂಡ್ ಮಣಿಯಬಾರದು. ಹಲವು ಚೇಲಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನ ಮಾಡಬಾರದು. ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ವಿಪಕ್ಷ ಸ್ಥಾನ ನೀಡದಿದ್ದರೆ ಜನರೇ ತೀರ್ಮಾನಿಸುತ್ತಾರೆ ಎಂದು ಯತ್ನಾಳ್ ಗುಡುಗಿದ್ದಾರೆ.