ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಬೆಂಗಾವಲು ವಾಹನದ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರಿನ ಬಾಪೂಜಿನಗರದ ನಿವಾಸದಲ್ಲಿ ಶರಣಗೌಡ ರಾಮಗೋಳ್ (33) ಎಂಬುವವರು ನೇಣಿಗೆ ಶರಣಾಗಿದ್ದು, ಅವರ ಅಕಾಲಿಕ ಮರಣವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಪ್ರಕರಣವು ನಿಗೂಢತೆಗೆ ತಿರುಗಿದೆ.
ಭಾನುವಾರ (ಅಕ್ಟೋಬರ್ 08) ಮನೆಯಲ್ಲಿ ಯಾರೂ ಇಲ್ಲದ ವೇಳೆ ಶರಣಗೌಡ ಅವರು ಈ ದುರಂತ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಶರಣಗೌಡ ಅವರ ಸಾವು ಅವರ ಕುಟುಂಬ ವರ್ಗ ಮತ್ತು ಪೊಲೀಸ್ ಇಲಾಖೆಯಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.
ಮೃತರ ಹಿನ್ನೆಲೆ
ಶರಣಗೌಡ ಅವರು ಪೊಲೀಸ್ ಇಲಾಖೆಯಲ್ಲಿ ಬೆಂಗಾವಲು ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ಆರ್. ಅಶೋಕ್ ಅವರ ಬೆಂಗಾವಲು ವಾಹನ ಚಾಲಕನಾಗಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ಶೈಲಶ್ರೀ ಅವರು ಮಾಗಡಿ ಸಂಚಾರ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆರ್. ಅಶೋಕ್ ಕಂಬನಿ: ಅಚ್ಚರಿಯ ಘಟನೆ ಬಿಚ್ಚಿಟ್ಟ ನಾಯಕ
ವಿಷಯ ತಿಳಿಯುತ್ತಿದ್ದಂತೆಯೇ ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿದ ಆರ್. ಅಶೋಕ್ ಅವರು, ಶರಣಗೌಡ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾವುಕರಾದರು.
“ಈ ವಿಚಾರ ತಿಳಿದು ನನಗೆ ಆಘಾತವಾಯಿತು. ನಾನು ಎರಡು ದಿನಗಳಿಂದ ಊರಲ್ಲಿ ಇರಲಿಲ್ಲ, ಬಂದ ತಕ್ಷಣ ಇಲ್ಲಿಗೆ ಬಂದೆ. ಶರಣಗೌಡ ತುಂಬಾ ಸೈಲೆಂಟ್ ವ್ಯಕ್ತಿ. ಮಾತು ಬಹಳ ಕಡಿಮೆ. ತನ್ನ ಕೆಲಸ, ತಾನಾಯಿತು ಎಂದು ಇರುವಂತಹ ಪ್ರಾಮಾಣಿಕ ವ್ಯಕ್ತಿ. ಇಂದು ಡ್ಯೂಟಿಗೆ ಬರುವುದಿಲ್ಲ, ಮಂತ್ರಾಲಯಕ್ಕೆ ಹೋಗುತ್ತಿರುವುದಾಗಿ ಹೇಳಿದ್ದನಂತೆ,” ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದರು.
ಸಾವಿಗೂ ಮುನ್ನ ನಡೆದ ಒಂದು ಅಚ್ಚರಿಯ ಘಟನೆಯನ್ನು ನೆನೆದ ಅಶೋಕ್, “ನವರಾತ್ರಿ ಹಬ್ಬಕ್ಕೆ ನಾನು ಸಿಹಿ ಮತ್ತು ಬಟ್ಟೆ ಕೊಟ್ಟಿದ್ದೆ. ಆಗ ಆತ ಅಚಾನಕ್ ಆಗಿ ನನ್ನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ. ಸಾಮಾನ್ಯವಾಗಿ ಪೊಲೀಸರು ಹೀಗೆ ಮಾಡುವುದಿಲ್ಲ, ಯಾಕಪ್ಪಾ ಹೀಗೆ ಮಾಡಿದೆ ಎಂದು ಕೇಳಿದ್ದೆ. ಅದೇ ಅವನ ಕೊನೆಯ ಭೇಟಿ ಎಂದುಕೊಂಡಿರಲಿಲ್ಲ. ಅವರ ಕುಟುಂಬ ಆರ್ಥಿಕವಾಗಿ ಸದೃಢವಾಗಿತ್ತು, ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ. ಅಂತಹ ಒಳ್ಳೆಯ ವ್ಯಕ್ತಿಯನ್ನು ಇಂದು ಕಳೆದುಕೊಂಡಿದ್ದೇವೆ,” ಎಂದು ಕಂಬನಿ ಮಿಡಿದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. “ನಾನು ಡಿಸಿಪಿ ಅವರೊಂದಿಗೆ ಮಾತನಾಡಿದ್ದೇನೆ. ಯಾವುದೇ ಡೆತ್ ನೋಟ್ ಸಿಕ್ಕಿದೆಯೇ ಎಂದು ಪರಿಶೀಲಿಸಲು ತಿಳಿಸಿದ್ದೇನೆ,” ಎಂದು ಅಶೋಕ್ ಹೇಳಿದರು. ಪೊಲೀಸರು ಶರಣಗೌಡ ಅವರ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದು, ಕುಟುಂಬ ಸಭ್ಯರು ಮತ್ತು ಆಪ್ತರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.
ಒಟ್ಟಿನಲ್ಲಿ, ಯುವ ಪೊಲೀಸ್ ಚಾಲಕನ ಅಕಾಲಿಕ ಸಾವು ಅವರ ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿ ಮೌನದ ವಾತಾವರಣವನ್ನು ಸೃಷ್ಟಿಸಿದೆ. ಆತ್ಮಹತ್ಯೆಯ ಹಿಂದಿನ ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.








