ಕಾಂಗ್ರೆಸ್ ನಾಯಕರು ಸಾಲು ಸಾಲಾಗಿ ಡಿನ್ನರ್ ಪಾರ್ಟಿ ಆಯೋಜಿಸುತ್ತಿದ್ದಾರೆ. ಪಿಡಬ್ಲ್ಯೂಡಿ ಸಚಿವ ಸತೀಶ ಜಾರಕಿಹೊಳಿ ಅವರು ಇತ್ತೀಚೆಗೆ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ, ಏಳು ಸಚಿವರು ಹಾಗೂ 35 ಶಾಸಕರು ಭಾಗವಹಿಸಿದ್ದರು. ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಡಿನ್ನರ್ ಆಯೋಜನೆ ಮಾಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಒದ್ದು ಕಿತ್ತು ಕೊಳ್ಳುತ್ತೇನೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಈ ಡಿನ್ನರ್ ಫೇರ್ವೆಲ್ ಪಾರ್ಟಿ ಇದ್ದಂತೆ. “ಮೇಯರ್ ಅವಧಿ ಮುಗಿದ ಮೇಲೆ ಬೀಳ್ಕೊಡುಗೆ ಇಟ್ಟುಕೊಳ್ಳುತ್ತಿದ್ದೇವೆ, ಆ ರೀತಿ ಆಗಿದೆ ಇವರ ಡಿನ್ನರ್ ಮೀಟಿಂಗ್” ಎಂದು ಅಶೋಕ್ ವ್ಯಂಗ್ಯವಾಡಿದರು.
“ಡಿಕೆ ಶಿವಕುಮಾರ್ ಯಾವಾಗ ಡಿನ್ನರ್ ಹಾಕಿಸುತ್ತಾರೆ, ಆಗ ಈ ಸರ್ಕಾರ ಬೀಳುತ್ತದೆ. 20 ಬಾರಿ ನಾನೇ ಮುಖ್ಯಮಂತ್ರಿ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾ ತಿರುಗಾಡುತ್ತಿದ್ದಾರೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದಾಗ ಈ ರೀತಿ ಪದೇಪದೇ ಹೇಳುತ್ತಿರಲಿಲ್ಲ” ಎಂದು ಆರ್. ಅಶೋಕ್ ತಿರುಗೇಟು ನೀಡಿದರು.








