ಡಿಂಪಲ್ ಕ್ವೀನ್ ರಚಿತಾ ರಾಮ್ ನಾಲ್ವತ್ತರ ವಯಸ್ಸಿನ ಪಾತ್ರ ಒಪ್ಪಿಕೊಂಡಿದ್ದಾರೆ ಎಂದು ಚಿತ್ರರಂಗ ಮಾತನಾಡಿಕೊಳ್ಳುತ್ತಿದೆ.
ಈಗಾಗಲೇ ಅವರು ಸಂಜು ವೆಡ್ಸ್ ಗೀತಾ- 2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ವೇಳೆ ದುನಿಯಾ ವಿಜಯ್ ನಟನೆಯ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಹೆಚ್ಚಿನ ವಯಸ್ಸಿನ ಪಾತ್ರಕ್ಕೆ ಓಕೆ ಅಂದಿದ್ದಾರೆ ಎನ್ನಲಾಗಿದೆ. ಜಂಟಲ್ ಮ್ಯಾನ್, ಗುರುಶಿಷ್ಯರು ಚಿತ್ರಗಳ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗತ್ತಿದೆ. ಈ ಚಿತ್ರಕ್ಕೆ ರಚಿತಾರಾಮ್ ನಾಯಕಿ. ದುನಿಯಾ ವಿಜಯ್ ಪುತ್ರಿ ರಿತನ್ಯ ಕೂಡ ಈ ಚಿತ್ರದ ಮೂಲಕವೇ ಚಂದನವನ ಪ್ರವೇಶಿಸಲಿದ್ದಾರೆ. ಡೇರ್ ಡೆವಿಲ್ ಮುಸ್ತಫಾ ಖ್ಯಾತಿಯ ಶಿಶಿರ್ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ.
ಈ ಚಿತ್ರ ನೈಜ ಕಥೆ ಎಂದು ನಿರ್ದೇಶಕ ಹೇಳಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಹಿರಿಯ ಸಾಹಿತಿ ಶಿವರಾಮ ಕಾರಂತರ “ಚೋಮನ ದುಡಿ”ಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಆದರೆ, “ಚೋಮನ ದುಡಿ” ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಚಿತ್ರಕ್ಕಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಕೋಲಾರ, ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ನಾಯಕ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ದುನಿಯಾ ವಿಜಯ್ ಮಗಳು ಈ ಚಿತ್ರದಲ್ಲಿ ಕೂಡ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.