“ಕಾಶ್ಮೀರದ ವೈವಿಧ್ಯಮಯ ಸಂಸ್ಕೃತಿಯನ್ನ ಹಾಳು ಮಾಡಲು ಬಿಜೆಪಿ ಯತ್ನ” – ಪಂಡಿತರಿಗೆ ನೆರವಾಗುವ ಭರವಸೆ ಕೊಟ್ಟ ರಾಹುಲ್..!
ಶ್ರೀನಗರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಶ್ಮೀರಿ ನಿರಾಶ್ರಿತ ಪಂಡಿತರನ್ನ ಭೇಟಿ ಮಾಡಿ ಅವರಿಗೆ ಎಲ್ಲಾ ರೀತಿಯಾದ ನೆರವು ನೀಡುವ ಭರವಸೆ ನೀಡಿದ್ದಾರೆ. ಅಲ್ಲದೇ ತಾವು ಹಾಗೂ ತಮ್ಮ ಕುಟುಂಬ ಸಹ ಇದೇ ಸಮುದಾಯಕ್ಕೆ ಸೇರಿದ್ದು ಕಾಶ್ಮೀರಿ ಜನರು , ಇಲ್ಲಿನ ಪಂಡಿತರ ಜೊತೆಗೆ ನಮಗೆ ನಂಟಿದೆ ಎಂದಿದ್ದಾರೆ. ಅಲ್ಲದೇ ಆರ್ಎಸ್ಎಸ್ ಹಾಗೂ ಬಿಜೆಪಿ, ಜಮ್ಮು ಕಾಶ್ಮೀರದ ವೈವಿಧ್ಯಮಯ ಸಂಸ್ಕೃತಿಯನ್ನು ಹಾಳು ಮಾಡಲು ನೋಡುತ್ತಿದೆ. ಇದರಿಂದಾಗಿ ಇಲ್ಲಿನ ಜನತೆಯ ನಡುವಿನ ಭ್ರಾತೃತ್ವದ ಮನೋಭಾವ ಹಾಳಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ನಿಮಗೆ ಸಹಾಯ ಮಾಡುತ್ತೇನೆ. ಈ ವಿಚಾರವಾಗಿ ನಾನು ಸುಳ್ಳು ಹೇಳುವುದಿಲ್ಲ ಎಂದು ನಾನು ಕಾಶ್ಮೀರಿ ಪಂಡಿತ ಸಹೋದರರಿಗೆ ತಿಳಿಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಸಭೆಯಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ. ಅಲ್ಲದೇ ಕಾಶ್ಮೀರಿ ಪಂಡಿತ ಸಹೋದರರ ನಿಯೋಗವು ನನ್ನ ಬಳಿ ಬಂದು ಮಾತನಾಡುತ್ತಿದ್ದ ವೇಳೆ ನಾನೂ ಸಹ ಇದೇ ಸಮುದಾಯಕ್ಕೆ ಸೇರಿದವನು ಎಂದು ನೆನಪಾಯಿತು. ಹೀಗಾಗಿ ಅವರ ನೋವು ನನಗೂ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ 25 ಲಕ್ಷ ರೂಪಾಯಿ ಪರಿಹಾರ ನೀಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ ಎಂದು ಕಾಶ್ಮೀರಿ ಪಂಡಿತರ ನಿಯೋಗ ತಿಳಿಸಿದೆ. ಕಾಶ್ಮೀರಿ ಪಂಡಿತರಿಗೆ ಪರಿಹಾರ ಘೋಷಣೆಯಾಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಆದ್ರೆ ಆ ಪರಿಹಾರ ಅವರಿಗೆ ಇನ್ನೂ ತಲುಪಿಲ್ಲ.
ನೆನ್ನೆ ನಾನು ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದೆ. ಈ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ನನ್ನ ಕುಟುಂಬದೊಂದಿಗೆ ಬಹಳ ಹಳೆಯ ನಂಟಿದೆ ಎಂದಿದ್ದಾರೆ. ಅಂದ್ಹಾಗೆ ರಾಹುಲ್ ಗಾಂಧಿ 13 ಕಿಮೀ ಪಾದಯಾತ್ರೆ ಮೂಲಕ ವೈಷ್ಣೋದೇವಿ ದೇವಸ್ಥಾನದ ಯಾತ್ರೆ ಪೂರೈಸಿದ್ದಾರೆ.