ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಧ್ಯಪ್ರದೇಶದ ರೇವಾದಲ್ಲಿ 750 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕವನ್ನು ಲೋಕಾರ್ಪಣೆ ಮಾಡಿದರು. ಇದನ್ನು ಕೇಂದ್ರ ಸರ್ಕಾರ ಏಷ್ಯಾ ಖಂಡದಲ್ಲಿರುವ ಅತಿ ದೊಡ್ಡ ಸೋಲಾರ್ ಪ್ಲಾಂಟ್ ಎಂದು ಹೇಳಿದ್ದು, ಇದಕ್ಕೆ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ 750 ಮೆಗಾವ್ಯಾಟ್ ರೇವಾ ಅಲ್ಟ್ರಾ ಮೆಗಾ ಸೌರ ವಿದ್ಯುತ್ ಯೋಜನೆ ಏಷ್ಯಾದ ಅತಿದೊಡ್ಡ ಯೋಜನೆ ಹೇಗಾದೀತು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ರೇವಾದಲ್ಲಿ 750 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕವನ್ನು ಏಷ್ಯಾದ ಅತಿದೊಡ್ಡ ವಿದ್ಯುತ್ ಯೋಜನೆ ಎಂದು ವಿವರಿಸುವ ಪ್ರಧಾನ ಮಂತ್ರಿಗಳ ಕಚೇರಿಯ ಟ್ವಿಟರ್ ಅನ್ನು ಟ್ಯಾಗ್ ಮಾಡಿ, ‘ಅಸತ್ಯಾಗ್ರಹಿ!’ (ಸತ್ಯವನ್ನು ಹೇಳದವರು) ಎಂದು ಟೀಕಿಸಿದ್ದಾರೆ.
ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿ, ಮಧ್ಯಪ್ರದೇಶದಲ್ಲಿ 750 ಮೆಗಾವ್ಯಾಟ್ ಸೋಲಾರ್ ಸ್ಥಾವರ ನಿರ್ಮಾಣವಾಗಿದ್ದು ಇದನ್ನು ಏಷ್ಯಾದ ಅತಿದೊಡ್ಡ ಘಟಕವೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಹಾಗಾದರೆ, ಪಾವಗಡದಲ್ಲಿರುವ 2000 ಮೆಗಾವ್ಯಾಟ್ ಘಟಕ ಏನು..? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಮೂರು ವರ್ಷದೊಳಗೆ ಕಾಂಗ್ರೆಸ್ ಸರ್ಕಾರ ಪಾವಗಡದಲ್ಲಿ ಸೋಲಾರ್ ಸ್ಥಾವರ ಸ್ಥಾಪಿಸಿದ್ದು 2018 ರಿಂದ ಕಾರ್ಯನಿರ್ವಹಿಸುತ್ತಿದೆ. 13,000 ಎಕರೆ ಜಮೀನನ್ನು ರೈತರಿಂದ ಗುತ್ತಿಗೆ ಪಡೆದು ಬಾಡಿಗೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 2000 ಮೆಗಾವ್ಯಾಟ್ ಪಾವಗಡ ಸೋಲಾರ್ ಪಾರ್ಕ್ ಬಿಟ್ಟು 750 ಮೆಗಾವ್ಯಾಟ್ ಸ್ಥಾವರವನ್ನು ಏಷ್ಯಾದ ಅತಿದೊಡ್ಡ ಘಟಕ ಎಂದು ಹೇಳಿಕೊಳ್ಳುತ್ತಿದ್ದು, ಈ ಕುರಿತಾಗಿ ಇಂಧನ ಸಚಿವರು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.