ರಾಜೀನಾಮೆಗೆ ಸಿದ್ಧ ಎಂದ ರಾಜಾಹುಲಿ : ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ
ಬೆಂಗಳೂರು : “ಹೈಕಮಾಂಡ್ ಸೂಚಿಸಿದ್ರೆ ತಕ್ಷಣ ರಾಜೀನಾಮೆ ನೀಡುತ್ತೇನೆ” ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿದೆ. ಬಿಜೆಪಿ ರಾಜಾಹುಲಿ ಈ ಹೇಳಿಕೆ ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದ್ರೆ, ರಾಜ್ಯ ರಾಜಕಾರಣದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ. ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ರೆ ಮುಂದೆ ಬಿಜೆಪಿ ಕಥೆ ಏನು..? ಬಿ.ಎಸ್.ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕ ಯಾರು..? ರಾಜ್ಯದ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆಗಳು ಈಗಾಗಲೇ ಉಸಿರಾಡಲು ಶುರು ಮಾಡಿದೆ.
ರಾಜೀನಾಮೆ ಸಿದ್ಧ
ಕೆಲ ದಿನಗಳಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಾಯಕತ್ವದ ಬದಲಾವಣೆ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, “ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ ಅಲ್ಲಿಯವರೆಗೂ ನಾನು ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ. ಆದರೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇದೆ” ಎಂದಿದ್ದಾರೆ.
ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ, ಅದನ್ನು ಶಕ್ತಮೀರಿ ಸದುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಉಳಿದಿದ್ದು ಹೈಕಮಾಂಡ್ಗೆ ಬಿಟ್ಟ ವಿಚಾರ. ಆದ್ದರಿಂದ ನಾನು ಯಾವುದೇ ಗೊಂದಲದಲ್ಲಿ ಇಲ್ಲ ಎಂದು ಸಿಎಂ ಬಿಎಸ್ ವೈ ಇದೇ ಮೊದಲ ಬಾರಿಗೆ ನಾಯಕತ್ವ ಬದಲಾವಣೆ ಬಗ್ಗೆ ಮೌನ ಮುರಿದಿದ್ದಾರೆ.
ಕೊರೊನಾ ಉಳಿಸಿತು ಸಿಎಂ ಪಟ್ಟ..!
ಹೌದು..! ಇದು ರಾಜ್ಯದ ಎಲ್ಲರಿಗೂ ತಿಳಿದಿರುವ ವಿಚಾರವೇ. ರಾಜ್ಯದಲ್ಲಿ ಕೊರೊನಾ ಸಂಕಷ್ಟ ಎದುರಾಗದಿದ್ದರೇ ಇಷ್ಟೋತ್ತಿಗಾಗಲೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದು ತುಂಬಾ ದಿನಗಳಾಗುತ್ತಿತ್ತು. ಕೊರೊನಾ ಸಂದರ್ಭದಲ್ಲಿ ಸಿಎಂ ಬದಲಾವಣೆ ಸರಿಯಲ್ಲ ಎಂಬ ಲೆಕ್ಕಾಚಾರದೊಂದಿಗೆ ಹಾಗೂ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಿಎಂ ಬದಲಾವಣೆಯಂತಹ ದೊಡ್ಡ ಕೆಲಸಕ್ಕೆ ಕೈ ಹಾಕಿದರೇ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು ಎಂಬ ಕಾರಣದಿಂದಾಗಿ ಬಿಜೆಪಿ ಬಿಗ್ ಬಾಸ್ ಗಳು ಸುಮ್ಮನಿದ್ದಾರೆ.
ಒಂದು ವೇಳೆ ಹೈಕಮಾಂಡ್ ಬಿಎಸ್ ವೈರ ರಾಜೀನಾಮೇ ಕೇಳಿದ್ದೇ ಆದಲ್ಲಿ ರಾಜ್ಯ ಬಿಜೆಪಿಯಲ್ಲಿ ಸುನಾಮಿ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೇ ಹೊಸ ಹೊಸ ರಾಜಕೀಯ ಲೆಕ್ಕಚಾರಗಳು ಕೂಡ ನಡೆಯುತ್ತದೆ.
ಒಟ್ಟಾರೆ ಸಿಎಂ ಪುತ್ರ ವಿಜಯೇಂದ್ರ ದೆಹಲಿಯ ಭೇಟಿ ಬಳಿಕ ಯಡಿಯೂರಪ್ಪ ಇಂತಹ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಕುರಿತಾಗಿ ಚರ್ಚೆ ನಡೆದಿರುವ ಹೊತ್ತಲ್ಲೇ ಇಂತಹ ಸಿಎಂ ಈ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.