ಬೆಂಗಳೂರು : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಬೆಂಗಳೂರಿನಾದ್ಯಂತ (Bengaluru) ಖಾಸಗಿ ವಾಹನಗಳ ಮಾಲೀಕರ ಒಕ್ಕೂಟ ಬಂದ್ ನಡೆಸಿ, ಪ್ರತಿಭಟಿಸುತ್ತಿದೆ. ಆದರೆ, ಈ ಸಂದರ್ಭದಲ್ಲಿ ರ‍್ಯಾಪಿಡೋ ಬೈಕ್ ಸವಾರನಿಗೆ ಪ್ರತಿಭಟನಾ ನಿರತರು ಥಳಿಸಿರುವ ಘಟನೆ ನಡೆದಿದೆ.
ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಪ್ರಯಾಣಿಕನನ್ನು ಕೂರಿಸಿಕೊಂಡು ತೆರಳುತ್ತಿದ್ದ ರ‍್ಯಾಪಿಡೋ ಬೈಕ್ ಸವಾರನನ್ನು ತಡೆದು, ಪ್ರತಿಭಟನಾಕಾರರು ಥಳಿಸಿದ್ದಾರೆ. ಅಲ್ಲದೇ, ದ್ವಿಚಕ್ರ ವಾಹನ ಸವಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾ ನಿರತರು ಸಂಚಾರ ಮಾಡುತ್ತಿರುವ ಆಟೋ ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿಕ ಆಟೋಗಳು ಜಮಾವಣೆಗೊಳ್ಳುತ್ತಿದ್ದು, ನೂರಾರು ಆಟೋಗಳು ಫ್ರೀಡಂ ಪಾರ್ಕ್ ಕಡೆ ತೆರಳುತ್ತಿವೆ. ಬೇಡಿಕೆ ಈಡೇರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.