ಭಾರತೀಯ ವಿಧಾನವೇ ಎಲ್ಲರನ್ನು ಜೋಡಿಸುವುದು, ಎಲ್ಲರನ್ನು ಒಂದುಗೂಡಿಸುವುದು: ರವಿಶಂಕರ ಗುರೂಜಿ
ಶಿವಮೊಗ್ಗ: ಪ್ರಪಂಚಕ್ಕೆ ಸಂತೋಷ ಕೊಡಬೇಕಿದ್ದರೆ ಅದು ಭಾರತೀಯ ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಇಂದು ವಿಶ್ವ ಸಂತೋಷದ ದಿನ ಅಂಗವಾಗಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಆರ್ಟ್ ಆಫ್ ಲಿವಿಂಗ್‍ನ 40ನೇ ವರ್ಷಾಚರಣೆ ಹಾಗೂ ಜ್ಞಾನಕ್ಷೇತ್ರ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ವಿಧಾನವೇ ಎಲ್ಲರನ್ನು ಜೋಡಿಸುವುದು, ಎಲ್ಲರನ್ನು ಒಂದುಗೂಡಿಸುವುದು ಆಗಿದೆ. ಮನುಷ್ಯ ಜೀವನ ಸಿಕ್ಕಿರುವುದು ಸುಮ್ಮನೆ ಉಂಡು, ತಿಂದು, ಮಲಗಿ, ಸಾಯೋದಕ್ಕಲ್ಲ. ನಗು ನಗುತಾ ಬಾಳುವುದು ಮನುಷ್ಯನ ಧರ್ಮ ಎಂದು ಸಂದೇಶ ನೀಡಿದರು.
ಅಲ್ಲದೇ ಕರ್ನಾಟಕದ ಜನರು ಸೌಮ್ಯ ಸ್ವಭಾವದವರು. ಇಂದು ಈ ಸೌಮ್ಯತನ ಇಡಿ ಪ್ರಪಂಚಕ್ಕೆ ಬೇಕಾಗಿದೆ. ನಮ್ಮಲ್ಲಿ ಸ್ವೀಕಾರ ಮನೋಭಾವ, ಸಹೃದಯತೆ ಇದೆಯಲ್ಲಾ ಅದು ಸಭ್ಯ ಸಂಸ್ಕೃತಿಗೆ, ಸಭ್ಯ ಸಮಾಜಕ್ಕೆ ಅವಶ್ಯಕತೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಯು.ಟಿ.ಖಾದರ್, ಶಾಸಕ ಬಿ.ಕೆ.ಸಂಗಮೇಶ್, ಎಂಎಲ್‍ಸಿ ಡಿ.ಎಸ್.ಅರುಣ್, ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.