ಬೆಂಗಳೂರು : ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸಮನ್ ಗಳ ವೈಫಲ್ಯ, ಕಳಪೆ ಫೀಲ್ಡಿಂಗ್ ನಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತೊಂದು ಸೋಲು ಕಂಡಿದೆ.
ಆರ್ ಸಿಬಿ ವಿರುದ್ಧ 21 ರನ್ ಗಳಿಂದ ಗೆದ್ದ ಕೋಲ್ಕತ್ತಾ ಈ ಆವೃತ್ತಿಯಲ್ಲಿ ಮೂರನೇ ಜಯ ದಾಖಲಿಸಿದೆ. ಗೆಲ್ಲಲು 201 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ್ದ ಬೆಂಗಳೂರು 8 ವಿಕೆಟ್ ನಷ್ಟಕ್ಕೆ 179 ರನ್ ಗಳನ್ನು ಮಾತ್ರ ಗಳಿಸಿ ಸೋಲು ಅನುಭವಿಸಿತು. ಈ ಆವೃತ್ತಿಯಲ್ಲಿ ಕೆಕೆಆರ್ ತಂಡವು ಆರ್ ಸಿಬಿ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ.
ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ (Virat Kohli) ಮತ್ತು ಫಾಫ್ ಡು ಪ್ಲೆಸಿಸ್ ಆರಂಭದಿಂದಲೇ ಬೌಲರ್ ಗಳನ್ನು ದಂಡಿಸಲು ಆರಂಭಿಸಿದರು. ಆದರೆ ಡುಪ್ಲೆಸಿಸ್ ಬಲವಾದ ಹೊಡೆತ ಹೊಡೆಯಲು ಹೋಗಿ 17 ರನ್ ಸಿಡಿಸಿ ಔಟಾದರು. ನಂತರ ಬಂದ ಶಾಬಾಜ್ ಅಹ್ಮದ್ 2 ರನ್, ಮ್ಯಾಕ್ಸ್ವೆಲ್ 5 ರನ್ ಗಳಿಸಿ ಔಟಾದರು.
ವಿಕೆಟ್ ಉರುಳುತ್ತಿದ್ದರೂ ಕೊಹ್ಲಿ ಮತ್ತು ಮಹಿಪಾಲ್ ಲೋಮ್ರೋರ್ 4ನೇ ವಿಕೆಟಿಗೆ 34 ಎಸೆತಗಳಲ್ಲಿ 55 ರನ್ ಜೊತೆಯಾಟ ನೀಡಿದರು. ಲೋಮ್ರೋರ್ 34 ರನ್, ಕೊಹ್ಲಿ54 ರನ್ ಔಟಾದರು. ದಿನೇಶ್ ಕಾರ್ತಿಕ್ 22 ರನ್ಗಳಿಸಿ ಕ್ಯಾಚ್ ನೀಡಿ ಹೊರ ನಡೆದರು.
ವರುಣ್ ಚಕ್ರವರ್ತಿ 3, ಸುಯೇಶ್ ಶರ್ಮಾ ಮತ್ತು ಅಂಡ್ರೆ ರಸಲ್ ತಲಾ 2 ವಿಕೆಟ್ ಪಡೆದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಜೇಸನ್ ರಾಯ್ 56 ರನ್, ನಾರಾಯಣ ಜಗದೀಶನ್ 27 ರನ್, 2 ಜೀವದಾನ ಪಡೆದ ನಾಯಕ ನಿತೀಶ್ ರಾಣಾ ಸ್ಫೋಟಕ 48 ರನ್, ರಿಂಕು ಸಿಂಗ್ ಔಟಾಗದೆ 18 ರನ್, ಡೇವಿಡ್ ವೈಸ್ ಔಟಾಗದೇ 12 ರನ್ ಗಳಿಸಿದರು. ಪರಿಣಾಮ ಕೆಕೆಆರ್ ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.