ಪಿತೃ ಪಕ್ಷ ದಲ್ಲಿ ತರ್ಪಣಾದಿಗಳ ಮಹತ್ವ ತಿಳಿಯಲು ಈ ಸುದ್ದಿ ಓದಿ
ಗರುಡಪುರಾಣದಲ್ಲಿ ಭಗವಂತನು ನುಡಿಯುತ್ತಾನೆ: ‘ಯಾವನು ಪುತ್ ಎಂಬ ನರಕದಿಂದ ಪಿತೃಗಳನ್ನು ಪಾರುಮಾಡುತ್ತಾನೋ ಅವನೇ ಪುತ್ರ’. ಆದುದರಿಂದ ಮಗನು ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ದಾನಗಳನ್ನು ಮಾಡಿ ತಮ್ಮ ಋಣ ತೀರಿಸಲೇಬೇಕು.
ಕಾಲ ಇಂಥ ವಿಶೇಷ ಕರ್ತವ್ಯವನ್ನು ಪಾಲಿಸಬೇಕಾದ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಕಾಲ.
ಯಾವ ಕಾಲದಲ್ಲಿ ಪಿತೃಗಳಿಗೆ ಸದ್ಗತಿ ನೀಡುವ ಕಾರ್ಯಗಳನ್ನು ಮಾಡಬೇಕು?
ಸಾಮಾನ್ಯವಾಗಿ ವಾರ್ಷಿಕ ಶ್ರಾದ್ದ ಅಂದರೆ ಮೃತರ ಶ್ರಾದ್ಧವನ್ನು ಅವರ ಮೃತಮಾಸದ ಆ ತಿಥಿಯಂದು ಪಿಂಡಗಳನ್ನು ಸಮರ್ಪಿಸಿ ಆಚರಿಸುತ್ತಾರೆ. ಆದರೆ ಅಂಥ ಸಮಯದಲ್ಲಿ ಶ್ರಾದ್ಧ ಮಾಡುವವರು ಪಿತೃ, ಪಿತಾಮಹ, ಪ್ರಪಿತಾಮಹ ಅಂದರೆ ತಂದೆ, ಅಜ್ಜ ಹಾಗೂ ಮುತ್ತಜ್ಜನಿಗೆ ಅಥವಾ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿಗೆ ಪಿಂಡಾದಿಗಳನ್ನಿಟ್ಟು ಶ್ರಾದ್ಧ ಮಾಡುತ್ತಾರೆ. ಆದರೆ ಭಾದ್ರಪದಮಾಸದ ಕೃಷ್ಣಪಕ್ಷದಲ್ಲಿ ಮಾತ್ರ ಕುಟುಂಬದಲ್ಲಿ ಮೃತರಾದ ಪ್ರತಿಯೊಬ್ಬರಿಗೂ ಪಿಂಡವನ್ನು ತರ್ಪಣಗಳನ್ನು ಕೊಡತ್ತಾರೆ.. ಕಾರಣ ಮಾಸಗಳಲ್ಲಿ ಅತ್ಯಂತ ಭದ್ರಮಾಸ ಎಂದು ಕರೆಯಲ್ಪಡುವುದು ಈ ಭಾದ್ರಪದ.
ಅದರಲ್ಲಿಯೂ ಕೃಷ್ಣಪಕ್ಷ ಪ್ರಾರಂಭಗೊಳ್ಳುವುದು ಸಾಮಾನ್ಯವಾಗಿ ಉತ್ತರಭಾದ್ರಾ ನಕ್ಷತ್ರದಿಂದ. ಅಂದರೆ ಮನುಷ್ಯಜನ್ಮ ಮುಗಿಸಿದ ಉತ್ತರದಲ್ಲಿ ಆ ಆತ್ಮಕ್ಕೆ ಶಾಶ್ವತ ಭದ್ರಸ್ಥಾನವನ್ನು ಪಿತೃಲೋಕದಲ್ಲಿ ಸ್ಥಾಪಿಸಲು ಹಾಗೂ ಅವರಿಗೆ ತರ್ಪಣಾದಿಗಳನ್ನು ಕೊಟ್ಟು ಶುಭವನ್ನು ಪಡೆಯಲು ಈ ಪಕ್ಷ ಸೂಕ್ತ ಸಮಯ. ವರ್ಷಕ್ಕೊಮ್ಮೆ ಏಕೆ ಎಂಬುದು ಸಾಮಾನ್ಯರ ಅನುಮಾನ. ಶಾಸಗಳ ಪ್ರಕಾರ ಭೂಲೋಕದಲ್ಲಿ ವಾಸ ಮಾಡುವ ನಮ್ಮ ಒಂದು ವರ್ಷ ಪಿತೃಲೋಕದವರಿಗೆ ಒಂದು ದಿವಸ. ಹೀಗಾಗಿ ವರ್ಷಕ್ಕೊಮ್ಮೆ ಪಿತೃಪಕ್ಷದಲ್ಲಿ ಪೂರ್ವಿಕರನ್ನು ಆರಾಸಿದರೆ ಪ್ರತಿದಿನ ಪಿತೃಗಳನ್ನು ಆರಾಸಿದಂತೆ. ಇನ್ನು ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿಯೇ ಏಕೆ? ‘ನಿರ್ಣಯಸಿಂಧು’ ಗ್ರಂಥದಲ್ಲಿ ತಿಳಿಸಿದಂತೆ ‘ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷದಲ್ಲಿ ಪಿತೃಗಳು ಪ್ರತಿದಿನ ಅನ್ನ ಹಾಗೂ ನೀರನ್ನು ಬಯಸುತ್ತಾರೆ.’
ಇಲ್ಲಿ ಪಕ್ಷ ಎಂದರೆ ೧೫ ತಿಥಿಗಳು. ಅಲ್ಲಿಗೆ ಆಷಾಢಮಾಸದ ಹುಣ್ಣಿಮೆಯ ನಂತರ ಐದನೆಯ ಪಕ್ಷ ಈ ಭಾದ್ರಪದ ಕೃಷ್ಣಪಕ್ಷ. ಆದುದರಿಂದ ಈ ಪಕ್ಷವನ್ನು ಪಿತೃಪಕ್ಷ ಎಂದು ಕರೆದಿದ್ದಾರೆ. ಆದುದರಿಂದ ಪಿತೃಗಳನ್ನು ತೃಪ್ತಿಪಡಿಸಲು ಅವರು ಬಯಸುವ ಅನ್ನವನ್ನು ಪಿಂಡಗಳ ಸಮರ್ಪಣೆ ಮೂಲಕ ಹಾಗೂ ಅವರು ಬಯಸುವ ನೀರನ್ನು ತರ್ಪಣಗಳ ಮೂಲಕ ನೀಡಿ ಪಿತೃಗಳ ಆಶೀರ್ವಾದಕ್ಕೆ ಪಾತ್ರರಾಗಬೇಕು.