ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ RCB ವಿಜಯೋತ್ಸವ ಮೆರವಣಿಗೆಯ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, ಈ ಭೀಕರ ಘಟನೆಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದೊಂದು ಪುಟ್ಟ ತಪ್ಪು ಅಲ್ಲ, ಇದು ಸರ್ಕಾರದ ದೊಡ್ಡ ವಿಫಲತೆಯ ಸಂಕೇತ ಎಂದು ಅವರು ಒತ್ತಾಯಿಸಿದರು.
CM, DCM ಪ್ರತಿಷ್ಠೆಗಾಗಿ ಜನರ ಜೀವ ತ್ಯಾಗ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ HDK, ಸರ್ಕಾರದ ಪ್ರಚಾರ ಮತ್ತು ಡಬಲ್ ಶೋ ಆಡುವ ಧೋರಣೆಗೆ ಜನ ಬಲಿಯಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಬ್ಬರೂ ತಮ್ಮ ತಮ್ಮ ಪ್ರತಿಷ್ಠೆಗೆ ಮೆರವಣಿಗೆಗಳನ್ನು 2 ಕಡೆ ಏರ್ಪಡಿಸಿ, ಜನರ ಜೀವವನ್ನೇ ಕಿತ್ತಿದ್ದಾರೆ. ಅವರ ನಿರ್ಲಕ್ಷ್ಯವೇ ಈ 11 ಅಮಾಯಕರ ಸಾವಿಗೆ ಕಾರಣವಾಗಿದೆ, ಎಂದು ಕಿಡಿಕಾರಿದರು.
ಈ ವಿಷಯದಲ್ಲಿ ಕೇವಲ ಕೆಲ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದರಿಂದ ಅಥವಾ ತನಿಖಾ ಆಯೋಗ ರಚಿಸುವುದರಿಂದ ಯಾವುದೇ ನ್ಯಾಯ ಸಿಗೋದಿಲ್ಲ. ಸರ್ಕಾರಕ್ಕೆ ನೈತಿಕ ಜವಾಬ್ದಾರಿಯಿರುವ ಬಗ್ಗೆ ಅರಿವಿಲ್ಲವೇನು? ಮೊದಲಿಗೆ ಸಿಎಂ ಮತ್ತು ಡಿಸಿಎಂ ಅವರನ್ನೇ ರಾಜೀನಾಮೆಗೆ ಒತ್ತಾಯಿಸಬೇಕು, ಎಂದು ಅವರು ಹೇಳಿದರು.
ಇದು ಕೇವಲ ಒಂದು ಘಟನೆ ಅಲ್ಲ. ಸರ್ಕಾರ ತನ್ನ ಜವಾಬ್ದಾರಿಗಳನ್ನು ಮರೆತು ಪಬ್ಲಿಸಿಟಿ ಶೋಗಳಿಗಾಗಿ ಕೆಲಸ ಮಾಡುತ್ತಿದೆ. 11 ಮಂದಿಯ ಸಾವಿಗೆ ನ್ಯಾಯ ಸಿಗಬೇಕಾದರೆ, ಈ ಸರ್ಕಾರಕ್ಕೆ ಮರ್ಯಾದೆ ಉಳಿಯಬೇಕಾದರೆ, CM ಸಿದ್ದರಾಮಯ್ಯ ಹಾಗೂ DCM ಡಿಕೆ ಶಿವಕುಮಾರ್‌ರನ್ನು ಮೊದಲು ಅಧಿಕಾರದಿಂದ ಹೊರಗೆ ಹಾಕಬೇಕು ಎಂದು HD ಕುಮಾರಸ್ವಾಮಿ ಹೇಳಿದ್ದಾರೆ.