ಬೆಂಗಳೂರು: ರೇಣುಕಾಸ್ವಾಮಿ (Renukaswamy)ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದರ್ಶನ್ ಹಾಗೂ ಟೀಂ ಪೊಲೀಸರ ವಶದಲ್ಲಿದೆ. ಈ ಮಧ್ಯೆ ಗೃಹ ಸಚಿವ ಜಿ. ಪರಮೇಶ್ವರ್(G Parameshwara) ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾ ಸ್ವಾಮಿ ಕುಟುಂಬಕ್ಕೆ ಪರಿಹಾರ ಒದಗಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಕ್ರಮ ಖಂಡಿತ ಇರುತ್ತದೆ. ದರ್ಶನ್ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ದರ್ಶನ್ ಗೆಳತಿ ಬಗ್ಗೆ ರೇಣುಕಾ ಸ್ವಾಮಿ ಪೋಸ್ಟ್ ಮಾಡಿದ್ದ ಎಂಬ ಆರೋಪವಿದೆ. ಹಾಗೆ ಮಾಡಿದ್ದರೆ ಬಗ್ಗೆ ದೂರು ನೀಡಬಹುದಿತ್ತು. ದೂರು ನೀಡಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ಆದರೆ, ರೇಣುಕಾಸ್ವಾಮಿಯನ್ನು ಕರೆತಂದು ಕೊಲೆ ಮಾಡಿರುವ ಆರೋಪವಿದೆ. ಹೀಗಾಗಿಯೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾನೂನು ಹಾಗೂ ತನಿಖೆಯ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ತನಿಖಾ ವರದಿ ಕೈಸೇರಿದ ನಂತರ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.