ದಿವ್ಯ ಕಾಶಿ – ಭವ್ಯಕಾಶಿ, ನಮೋ ಕನಸಿನ ಯೋಜನೆ ಉದ್ಘಾಟನೆ….
ಇಂದು ವಾರಣಾಸಿಯಲ್ಲಿ ನಮೋ ಕನಸಿನ ಯೋಜನೆ ಶ್ರೀಕಾಶಿ ವಿಶ್ವನಾಥ ಧಾಮದ ನೂತನ ಸಂಕೀರ್ಣ ಉದ್ಘಾಟನೆಯಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ತಲುಪಿದ್ದಾರೆ ಇದು ಅವರ ಸಂಸದೀಯ ಕ್ಷೇತ್ರವೂ ಹೌದು. ಹನ್ನೊಂದು ಗಂಟೆಯ ಸುಮಾರಿಗೆ ಕಾಶಿ ತಲುಪಿದ ಮೋದಿ ಕಾಲ ಭೈರವ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ಖಿರ್ಕಿಯಾ ಘಾಟ್ವರೆಗೆ ಕಾಲ್ನಡಿಗೆಯಲ್ಲಿ ತೆರಳಿದರು. ಇಲ್ಲಿಂದ ಲಲಿತಾ ಘಾಟ್ ತೆರಳಿ ಗಂಗಾ ಸ್ನಾನ ಮಾಡಿ ಸೂರ್ಯನ್ನ ಪೂಜಿಸದರು. ನಂತರ ಪ್ರಧಾನಿ ವಿಶ್ವನಾಥ್ ಸನ್ನಿಧಾನಕ್ಕೆ ತೆರಳಿ ಪೂಜೆ ಕೈಗೊಳ್ಳಲಿದ್ದಾರೆ. ಗಂಗಾಜಲದ ಮೂಲಕ ಕಾಶಿ ವಿಶ್ವನಾಥನಿಗೆ ಅಭಿಷೇಕ ಮಾಡಲಿದ್ದಾರೆ.
ಮೋದಿಯವರ ಕನಸಿನ ಯೋಜನೆಯಾದ ಕಾಶಿಯಲ್ಲಿ ವಿಶ್ವನಾಥ ಧಾಮವನ್ನು 800 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತವಾಗಿ 339 ಕೋಟಿ ರೂ ಮೊತ್ತದ ದೇವಸ್ಥಾನದ ಕಾರಿಡಾರ್ ಇಂದು ಉದ್ಘಾಟನೆಯಾಗಲಿದೆ. ಪುರಾತನ ದೇವಾಲಯದ ಮೂಲ ಸ್ವರೂಪವನ್ನು ಕಾಪಾಡಿಕೊಂಡು 5 ಲಕ್ಷ 27 ಸಾವಿರ ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರಧಾನಿ ಮೋದಿ ಅವರು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಪೂಜೆ ಸಲ್ಲಿಸಲಿದ್ದಾರೆ ಮತ್ತು ಮಧ್ಯಾಹ್ನ 1:20 ರ ಸುಮಾರಿಗೆ ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಲಿದ್ದಾರೆ. ಇದಾದ ನಂತರ ದೇಶಾದ್ಯಂತ 2500 ಸಂತರು-ಮಹಾಂತರು, ಧಾರ್ಮಿಕ ಮುಖಂಡರು, ಆಧ್ಯಾತ್ಮಿಕ ಮುಖಂಡರು ಮತ್ತು ಗಣ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 6 ಗಂಟೆಗೆ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.