ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ನೌಕರ
ಬೆಂಗಳೂರು: ಇಬ್ಬರು ಹೆಂಡತಿಯರ ಪತಿ ಜೀವನದಲ್ಲಿ ಜಿಗುಪ್ಸೆಗೊಂಡು ಅಪಾರ್ಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ನಡೆದಿದೆ.
ರಾಜೀವ್(62) ಮೃತ ದುರ್ದೈವಿ. ಇವರು ನಿವೃತ್ತ ನೌಕರರಾಗಿದ್ದು, ಇಬ್ಬರು ಹೆಂಡತಿಯರು ಮತ್ತು ಮಗನಿಂದ ದೂರವಾಗಿ ಏಕಾಂಗಿ ಜೀವನ ನಡೆಸುತ್ತಿದ್ದರು. ಇಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ಯಲಹಂಕದ ವ್ಹೀಲ್ ಆ್ಯಂಡ್ ಆಕ್ಸೆಲ್ ಕಂಪನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಇವರಿಗೆ ಇಬ್ಬರು ಹೆಂಡತಿಯರಿದ್ದರು. ಮೊದಲ ಹೆಂಡತಿ ಕಾರಣಾಂತರದಿಂದ ವಿಚ್ಛೇದನ ಪಡೆದಿದ್ದರು. ಬಳಿಕ ಎರಡನೇ ಮದುವೆಯಾಗಿದ್ದರು. ಈ ದಂಪತಿಗಳಿಗೆ ಒಬ್ಬ ಮಗನಿದ್ದನು. ಬಳಿಕ ಇವರಿಂದಲೂ ದೂರ ಉಳಿದು 4 ತಿಂಗಳಿಂದ ಸಿಂಗನಾಯಕನಹಳ್ಳಿಯ ಗೋದ್ರೇಜ್ ಅಪಾರ್ಟ್ಮೆಂಟ್ನಲ್ಲಿ ಏಕಾಂಗಿಯಾಗಿ ಉಳಿದುಕೊಂಡಿದ್ದರು.
ಇಂದು ರಾಜೀವ್ ಅವರು ಒಂಟಿತನದಿಂದ ಬೇಸತ್ತು ಇಂದು ಅಪಾರ್ಟ್ಮೆಂಟ್ನಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದುರಂತ ನಡೆದ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎರಡನೇ ಹೆಂಡತಿ ಬಂದ ನಂತರ ಶವ ಪರೀಕ್ಷೆ ನಡೆಸಿ ರಾಜೀವ್ ಮೃತದೇಹವನ್ನು ವಶಕ್ಕೆ ನೀಡಲಾಗುತ್ತದೆ.