ಮುಂಬೈ, ಮೇ 28 : ನಟ ರಿತೇಶ್ ದೇಶ್ ಮುಖ್, ತನ್ನ ತಂದೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ 75ನೇ ಜನ್ಮದಿನದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡು ಗದ್ಗದಿತರಾಗಿದ್ದಾರೆ.
ರಿತೇಶ್ ತನ್ನ ತಂದೆಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲು ವೀಡಿಯೋವನ್ನು ಚಿತ್ರೀಕರಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಿನ್ನಲೆಯಲ್ಲಿ 2012ರ ಅಗ್ನಿಪಥ್ ಚಿತ್ರದ ‘ಅಭಿ ಮುಜ್ ಮೇನ್ ಕಹಿನ್’ ಹಾಡು ಕೇಳಿ ಬರುವ ವೀಡಿಯೋದಲ್ಲಿ, ರಿತೇಶ್ ಹ್ಯಾಂಗರ್‌ನಲ್ಲಿ ನೇತು ಹಾಕಿರುವ ತಂದೆಯ ಕುರ್ತಾದ ಕೈಯೊಳಗೆ ತಮ್ಮ ಒಂದು ಕೈ ತೂರಿಸಿ, ತಂದೆಯನ್ನು ಅಪ್ಪಿಕೊಳ್ಳುವ ರೀತಿಯಲ್ಲಿ ಕಾಣುವಂತೆ ತಮ್ಮನ್ನೇ ಆಲಂಗಿಸಿಕೊಂಡಿದ್ದಾರೆ. ಅದರ ಕೆಳಗೆ ಹ್ಯಾಪಿ ಬರ್ತ್ ಡೇ ಪಪ್ಪಾ.. . ನಿಮ್ಮನ್ನು ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರಿತೇಶ್ ಪತ್ನಿ, ನಟಿ ಜೆನಿಲಿಯಾ ಡಿ ಸೋಜಾ ಕೂಡ ಮಾವ ವಿಲಾಸ್ ರಾವ್ ದೇಶ್‌ಮುಖ್ ಅವರನ್ನು ನೆನಪಿಸಿಕೊಂಡಿದ್ದು, ವಿಲಾಸ್ ರಾವ್ ದೇಶ್‌ಮುಖ್ ಅವರ ಪ್ರತಿಮೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವೀಡಿಯೋದ ಕೆಳಗೆ, ಶಿಕ್ಷಕರು ರಿಯಾನ್(ಮಗ)ನನ್ನು ನೀನು ಯಾವುದರ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಿ ಎಂದು ಕೇಳಿದಕ್ಕೆ, ಆತ ನನ್ನ ತಾತ ಎಂದು ಉತ್ತರಿಸಿದ ಎಂದು ಬರೆದುಕೊಂಡಿದ್ದಾರೆ.
‘ನೀವು ನಮ್ಮ ಹೆಮ್ಮೆ ಪಪ್ಪಾ.. ನೀವು ನಿತ್ಯವೂ ನಮ್ಮೊಂದಿಗೆ ಇದ್ದಂತೆ ಅನಿಸುತ್ತದೆ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ನಮ್ಮನ್ನೆಲ್ಲಾ ಯಾವಾಗಲೂ ನೋಡುತ್ತಿರುತ್ತೀರಿ ಎಂದು ನಾನು ಭಾವಿಸಿದ್ದೇನೆ. ನೀವು ನಮ್ಮಲ್ಲಿ ಜೀವಂತವಾಗಿದ್ದೀರಿ. ನಾವು ಪ್ರತಿ ದಿನವನ್ನೂ ನಿಮ್ಮೊಂದಿಗೆ ಸಂಭ್ರಮದಿಂದ ಕಳೆಯುತ್ತಿದ್ದೇವೆ. ಹ್ಯಾಪಿ ಬರ್ತ್ ಡೇ ಪಪ್ಪಾ’ ಎಂದು ಬರೆದು ಕೊಂಡಿದ್ದಾರೆ.








