ವೆಸ್ಟ್ ಇಂಡೀಸ್ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಲು ನಾಯಕ ರೋಹಿತ್ ಶರ್ಮ ಸಜ್ಜಾಗಿದ್ದು, ಈ ಸರಣಿ ಮೂಲಕ ODI ಕ್ರಿಕೆಟ್ನಲ್ಲಿ ಮಹತ್ವದ ದಾಖಲೆ ಮೇಲೆ ʼಹಿಟ್ ಮ್ಯಾನ್ʼ ಕಣ್ಣಿಟ್ಟಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಆಗಿರುವ ರೋಹಿತ್ ಶರ್ಮ, ODI ಕ್ರಿಕೆಟ್ನಲ್ಲಿ ಈಗಾಗಲೇ ಹಲವು ಮಹತ್ವದ ದಾಖಲೆಗಳನ್ನ ನಿರ್ಮಿಸಿ ಗಮನ ಸೆಳೆದಿದ್ದಾರೆ. ಅಲ್ಲದೇ ಇತ್ತೀಚೆಗೆ ನಡೆದ ಕೆರೆಬಿಯನ್ನರ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ‘ಹಿಟ್ ಮ್ಯಾನ್’ ಇದೀಗ ಏಕದಿನ ಸರಣಿಯಲ್ಲೂ ಅಬ್ಬರಿಸಲು ಕಾದಿದ್ದಾರೆ. ಅಲ್ಲದೇ ಈ ನಡುವೆ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್ನ ಎಲೈಟ್ ಲಿಸ್ಟ್ ಸೇರುವ ಹೊಸ್ತಿಲಲ್ಲಿದ್ದು, ವೇಗವಾಗಿ 10000 ಸಾವಿರ ರನ್ ಪೂರೈಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆಯುವ ತವಕದಲ್ಲಿದ್ದಾರೆ.
ಭಾರತ ತಂಡದ ಆರಂಭಿಕ ಬ್ಯಾಟರ್ ಆಗಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಈವರೆಗೂ 236 ಏಕದಿನ ಇನ್ನಿಂಗ್ಸ್ ಆಡಿದ್ದು, ಇದರಲ್ಲಿ 9825 ರನ್ಗಳನ್ನ ಕಲೆಹಾಕಿದ್ದಾರೆ. ಹೀಗಾಗಿ 10 ಸಾವಿರ ರನ್ಗಳ ಗಡಿದಾಟಲು ರೋಹಿತ್ ಶರ್ಮಾಗೆ ಕೇವಲ 175 ರನ್ಗಳ ಅಗತ್ಯವಿದೆ. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಈ ರನ್ಗಳನ್ನ ಕಲೆಹಾಕಿದ್ದೇ ಆದಲ್ಲಿ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಹೆಗ್ಗಳಿಕೆ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅವರದ್ದಾಗಿದೆ.
‘ಚೇಸ್ ಮಾಸ್ಟರ್’ ವಿರಾಟ್ ಕೊಹ್ಲಿ ಕೇವಲ 205 ಏಕದಿನ ಪಂದ್ಯಗಳ ಇನ್ನಿಂಗ್ಸ್ನಲ್ಲಿ 10 ಸಾವಿರ ರನ್ಗಳ ಮೈಲುಗಲ್ಲು ದಾಟ್ಟುವ ಮೂಲಕ ಈ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ನಂತರದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಮಹೇಂದ್ರ ಸಿಂಗ್ ಧೋನಿ ಹಾಗೂ ಬ್ರಿಯಾನ್ ಲಾರಾ ಅವರುಗಳು ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 10 ಸಾವಿರ ರನ್ಗಳನ್ನ ಪೂರೈಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಈ ಸಾಲಿಗೆ ಸೇರ್ಪಡೆಯಾಗುವ ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಈ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ. ಅಲ್ಲದೇ ಕೊಹ್ಲಿ ನಂತರದಲ್ಲಿ ವೇಗವಾಗಿ ಈ ಸಾಧನೆ ಮಾಡುವ ಮೂಲಕ ಭಾರತ ತಂಡದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಹಿಂದಿಕ್ಕುವ ಎಲ್ಲಾ ಅವಕಾಶ ಹೊಂದಿದ್ದಾರೆ.