ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ದೊಣ್ಣೆ ಹಿಡಿದು ಸಮಾಜದಲ್ಲಿ ಭಯ ಸೃಷ್ಟಿಸುವವರಿಗೆ ಭವಿಷ್ಯವಿಲ್ಲ ಎಂದು ಗುಡುಗಿದ್ದಾರೆ. ಆರ್‌ಎಸ್‌ಎಸ್ ತನ್ನ ನಡವಳಿಕೆ ಬದಲಿಸಿಕೊಳ್ಳದಿದ್ದರೆ, ಜನರ ಕೈಯಲ್ಲೇ ದೊಣ್ಣೆಯಿಂದ ಹೊಡೆಸಿಕೊಳ್ಳುವ ದಿನಗಳು ದೂರವಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸರಣಿ ಹೇಳಿಕೆಗಳನ್ನು ನೀಡಿರುವ ಅವರು, ಆರ್‌ಎಸ್‌ಎಸ್‌ನ ಪಥಸಂಚಲನ, ಅದರ ಕಾರ್ಯವೈಖರಿ ಮತ್ತು ಫಂಡಿಂಗ್ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ದೊಣ್ಣೆಯಿಂದ ಭರವಸೆ ಮೂಡಿಸಲು ಸಾಧ್ಯವಿಲ್ಲ
ಬಿ.ಎಲ್. ಸಂತೋಷ್ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಹರಿಪ್ರಸಾದ್, “ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ. ಈ ದೇಶದ ಜನರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಭರವಸೆಯನ್ನು ಮೂಡಿಸಿರುವುದು ಬಾಬಾ ಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಮಾತ್ರ,” ಎಂದು ಸ್ಪಷ್ಟಪಡಿಸಿದ್ದಾರೆ.
ಪಥಸಂಚಲನ ಒಂದು ದ್ವೇಷದ ವಾತಾವರಣದ ನಿರ್ಮಾಣ
ಆರ್‌ಎಸ್‌ಎಸ್‌ನ ಪಥಸಂಚಲನವನ್ನು ‘ದ್ವೇಷದ ಬೀದಿ’ ಎಂದು ಕರೆದ ಅವರು, “ಪಥ ಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟುವುದಾದರೂ ಹೇಗೆ? ದೊಣ್ಣೆ, ಲಾಠಿ, ಬೂಟಿನ ಪಥಸಂಚಲನದಿಂದ ಸಮಾಜದಲ್ಲಿ ಕೇವಲ ಭಯ ಮತ್ತು ದ್ವೇಷದ ವಾತಾವರಣ ನಿರ್ಮಾಣವಾಗುತ್ತಿದೆ. ಇದರ ಮೂಲ ಉದ್ದೇಶವೇ ಭಯ ಹುಟ್ಟಿಸುವುದು ಎಂಬುದು ಸ್ಪಷ್ಟ,” ಎಂದು ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಒಂದು ಭೂಗತ ಸಂಘಟನೆಯೇ?
ಸಂಘಟನೆಯ ಹಣಕಾಸಿನ ಮೂಲವನ್ನು ಪ್ರಶ್ನಿಸಿರುವ ಹರಿಪ್ರಸಾದ್, “ಆರ್‌ಎಸ್‌ಎಸ್ ಒಂದು ‘ಪೇಯ್ಡ್’ ಸಂಘಟನೆಯಲ್ಲ ಎಂದಾದರೆ, ದೇಶ-ವಿದೇಶಿ ಮೂಲಗಳಿಂದ ಹರಿದುಬರುತ್ತಿರುವ ಕೋಟ್ಯಂತರ ರೂಪಾಯಿ ಹಣಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ. “ಸಮಾಜ ಸೇವೆ ಮಾಡಲು ಆರ್‌ಎಸ್‌ಎಸ್ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಯಾಗಿ ನೋಂದಣಿಯಾಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ? ಕೇವಲ ಆರ್‌ಎಸ್‌ಎಸ್‌ಗೆ ವಿದೇಶದಿಂದ ಹಣ ಬರಲಿ ಎಂಬ ದುರುದ್ದೇಶದಿಂದಲೇ ಎನ್‌ಜಿಒಗಳಿಗೆ ಬರುವ ವಿದೇಶಿ ದೇಣಿಗೆಯನ್ನು ನಿಲ್ಲಿಸಲಾಗಿದೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ
ನೂರು ವರ್ಷಗಳ ಇತಿಹಾಸದಲ್ಲಿ ಆರ್‌ಎಸ್‌ಎಸ್ ಸಮಾಜಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, “ಹಾದಿಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯವಸ್ಥೆ ಹಾಳು ಮಾಡಿದ್ದೇ ನಿಮ್ಮ ಸಾಧನೆಯೇ?” ಎಂದು ವ್ಯಂಗ್ಯವಾಡಿದ್ದಾರೆ. ಕೊನೆಯಲ್ಲಿ ಖಡಕ್ ಎಚ್ಚರಿಕೆ ನೀಡಿರುವ ಅವರು, “ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ. ಬೇಗ ಎಚ್ಚೆತ್ತುಕೊಳ್ಳದಿದ್ದರೆ ಆರ್‌ಎಸ್‌ಎಸ್‌ಗೆ ಉಳಿಗಾಲವಿಲ್ಲ,” ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.








