ಕೀವ್/ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧ (Russia Ukraine War) ಏಳೆಂಟು ತಿಂಗಳು ಕಳೆದರೂ ಇನ್ನು ಸದ್ದು ಮಾಡುತ್ತಿದೆ. ಈಗಾಗಲೇ ಇದು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡರೂ ಮತ್ತೆ ಮುಂದುವರೆದಿದೆ.
ಜಗತ್ತಿನ ಹಲವಾರು ರಾಷ್ಟ್ರಗಳು ಶಾಂತಿ ಕಾಪಾಡುವಂತೆ ಎರಡೂ ರಾಷ್ಟ್ರಗಳಿಗೆ ಈಗಾಗಲೇ ಹೇಳಲಾಗಿದೆ. ಆದರೂ ರಷ್ಯಾ ಮಾತ್ರ ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ರಷ್ಯಾ ಸೇನೆಯು ಉಕ್ರೇನ್‌ನ ಖಾರ್ಕೀವ್ ಪೂರ್ವ ಪ್ರದೇಶದ ದಿನಸಿ ಅಂಗಡಿ ಹಾಗೂ ಕೆಫೆಯೊಂದರ ಮೇಲೆ ದಾಳಿ (Russian Rocket Strike) ನಡೆಸಿದ್ದು, ಘಟನೆಯಲ್ಲಿ 49 ಜನ ಸಾವನ್ನಪ್ಪಿದ್ದಾರೆ. ಗ್ರೋಜಾ ಗ್ರಾಮದಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಖಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ತಿಳಿಸಿದ್ದಾರೆ.
ಕಾರ್ಕೀವ್ ಪ್ರದೇಶಗಳನ್ನು ಮರಳಿ ಪಡೆದುಕೊಳ್ಳಲು ಉಕ್ರೇನ್ ಕಸರತ್ತು ನಡೆಸುತ್ತಿದೆ. ಆದರೆ, ರಷ್ಯಾ ಪ್ರತಿದಾಳಿ ನಡೆಸುತ್ತಿದೆ. ಮೂಲ ಸೌಕರ್ಯಗಳನ್ನು ನಾಶಪಡಿಸುತ್ತಿದೆ. ಇದು ರಷ್ಯಾದ ಉದ್ದೇಶಿದ ಭಯೋತ್ಪಾದಕ ದಾಳಿ ಎಂದು ಉಕ್ರೇನಿಯನ್ ಪ್ರಾಸಿಕ್ಯೂಟರ್ ಜನರಲ್ ಆರೋಪಿಸಿದ್ದಾರೆ.