500 ಜನ ಉಕ್ರೇನಿಯರನ್ನು ಒತ್ತೆಯಾಳಾಗಿ ಇರಿಸಿಕೊಂಡ ರಷ್ಯಾ – Saaksha Tv
ಉಕ್ರೇನ್ : ರಷ್ಯಾ-ಉಕ್ರೇನ್ ಯುದ್ಧ 21 ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ರಾತ್ರಿ ರಷ್ಯಾ ಬಂದರು ನಗರಿ ಮರಿಯುಪೋಲ್‌ನಲ್ಲಿರುವ ಆಸ್ಪತ್ರೆಯ ಮೇಲೆ ಭೀಕರ ದಾಳಿ ನಡೆಸಿ ಆಸ್ಪತ್ರೆಯನ್ನು ವಶಪಡಿಸಿಕೊಂಡಿದೆ.
ಆಸ್ಪತ್ರೆಯನ್ನು ವಶಪಡಿಸಿಕೊಂಡ ರಷ್ಯಾ ಸುಮಾರು 500 ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಡಿದೆ. ಇದರಲ್ಲಿ 400 ಸಾಮಾನ್ಯ ಜನರಾಗಿದ್ದು, 100 ಜನ ವೈದ್ಯರು ಮತ್ತು ರೋಗಿಗಳಾಗಿದ್ದಾರೆ ಎಂದು ಅಲ್ಲಿನ ಪ್ರಾದೇಶಿಕ ನಾಯಕ ಪಾವ್ಲೊ ಕಿರಿಲೆಂಕೊ ಅವರು ಟೆಲಿಗ್ರಾಮ್ ಮೂಲಕ ಸಂದೇಶ ರವಾನಿಸಿದ್ದಾರೆ.
ಮರಿಯುಪೋನಲ್ಲಿ ರಷ್ಯಾ ಸೈನಿಕರು ಹಲವು ಮನೆಗಳಿಂದ 400 ಜನರನ್ನು ಓಡಿಸಿ ಪ್ರಾದೇಶಿಕ ತೀವ್ರ ನಿಗಾ ಆಸ್ಪತ್ರೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ರಷ್ಯಾ ಪಡೆಗಳು ಆಸ್ಪತ್ರೆಯ ಒಳಗಿರುವವರನ್ನು ಮಾನವ ಗುರಾಣಿಯಾಗಿ ಬಳಸುತ್ತಿವೆ. ಯಾರನ್ನೂ ಹೊರಗಡೆ ಬಿಡುತ್ತಿಲ್ಲ. ಆಸ್ಪತ್ರೆಯಿಂದ ಹೊರಹೋಗುವುದು ಅಸಾಧ್ಯವಾಗಿದ್ದು, ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆಸ್ಪತ್ರೆಯ ಮುಖ್ಯ ಕಟ್ಟಡವು ಶೆಲ್ ದಾಳಿಯಿಂದ ಹೆಚ್ಚು ಹಾನಿಗೊಳಗಾಗಿದೆ. ಆದರೆ, ವೈದ್ಯಕೀಯ ಸಿಬ್ಬಂದಿ ನೆಲಮಾಳಿಗೆಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ವಾರ್ಡ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಿದ್ದಾರೆ. ಈ ಯುದ್ಧದ ನಿಯಮಗಳು ಮತ್ತು ಸಂಪ್ರದಾಯಗಳ ಸಂಪೂರ್ಣ ಉಲ್ಲಂಘನೆ, ಮಾನವೀಯತೆಯ ವಿರುದ್ಧದ ಘೋರ ಅಪರಾಧಗಳ ಬಗ್ಗೆ ಜಗತ್ತು ಧ್ವನಿ ಎತ್ತಬೇಕು ಎಂದು ಕೋರಿದರು.
ರಷ್ಯಾದ ಪಡೆಗಳು ನಗರದ ಪಶ್ಚಿಮ ಮತ್ತು ಪೂರ್ವ ಹೊರವಲಯದಿಂದ ನಗರವನ್ನು ನಿರ್ಬಂಧಿಸಲು ಪ್ರಯತ್ನಿಸುತ್ತಿವೆ. ಈಗಾಗಲೇ ಹೆಚ್ಚಿನ ನಷ್ಟಗಳಾಗಿವೆ ಎಂದು ಉಕ್ರೇನ್ ಸೇನಾ ಜನರಲ್ ಸ್ಟಾಫ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.