ಮೈಸೂರು ಡಿಸಿ ವಿರುದ್ಧ ತನಿಖೆಗೆ ಸಾ.ರಾ.ಮಹೇಶ್ ಆಗ್ರಹ
ಮೈಸೂರು : ಕೊರೊನಾ ಅಂಕಿ ಅಂಶಗಳಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಪ್ಪು ಲೆಕ್ಕಗಳನ್ನು ತೋರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಿಸಿದ್ದಾರೆ. ಅಲ್ಲದೇ ಅವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ಹೆಚ್ಚು ಕೇಸ್ ಇರುವುದರಲ್ಲಿ ನಂ.1. ಅತಿಹೆಚ್ಚು ಸಾವು ಆಗಿರುವ ಜಿಲ್ಲೆಗಳಲ್ಲಿ ನಂ.1. ಆದ್ರೆ ಸಾವಿನ ಸಂಖ್ಯೆ ಇಳಿಸಿದ್ದೇವೆ, ಮೈಸೂರಿನಲ್ಲಿ ನಾನು ಸಾಧನೆ ಮಾಡಿದ್ದೇನೆ ಅಂತ ತೋರಿಸಿಕೊಳ್ಳುತ್ತಿದ್ದಾರೆ.
ಟೆಸ್ಟಿಂಗ್ ಕಡಿಮೆ ಮಾಡಿದ ಪರಿಣಾಮ ಕೇಸ್ ಕಡಿಮೆ ಆಗಿದೆ. ಈ ವಿಚಾರವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ.
ಅವರ ಸೂಚನೆ ಬಳಿಕ 8000 ಟೆಸ್ಟಿಂಗ್ ಶುರುವಾಗಿದೆ. ನಗರದಲ್ಲಿ ಮೃತಪಟ್ಟಿರುವ ಸಂಖ್ಯೆಯ ದಾಖಲೆ ತೆಗೆಸಿದ್ದೇನೆ. ಇನ್ನು ಮೈಸೂರು ಜಿಲ್ಲೆಯಲ್ಲಿ ಎಷ್ಟು ಸಾವಿರ ಜನ ಸತ್ತಿದ್ದಾರೋ ಗೊತ್ತಿಲ್ಲ ಎಂದರು.
ಇನ್ನು ಮುಂದಿನ ದಿನಗಳಲ್ಲಿ ಅದರ ಮಾಹಿತಿಯನ್ನೂ ತರಿಸುತ್ತೇನೆ. ಸತ್ತ ಕುಟುಂಬಗಳಿಗೂ ಯಾವುದಾದರೂ ರೂಪದಲ್ಲಿ ಸಹಾಯ ಆಗಬೇಕಲ್ವಾ.?
ನಿಮ್ಮ ಸುಳ್ಳು ಲೆಕ್ಕದಿಂದಾಗಿ ಕುಟುಂಬಸ್ಥರಿಗೆ ಮೋಸ ಆಗೋದು ಬೇಡ ಎಂದು ಹೆಸರೇಳದೇ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದರು.
ಅಲ್ಲದೇ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಡಿಸಿ ವಿರುದ್ಧ ಕೂಡಲೇ ತನಿಖೆಗೆ ಆದೇಶ ಮಾಡಬೇಕು ಎಂದು ಸಾ ರಾ ಮಹೇಶ್ ಒತ್ತಾಯಿಸಿದರು.