ಪೀರ ಕರೀಮರ ಬಾಳಲ್ಲೂ ಬೆಳಕು ಮೂಡಿಸಿದ ಸದಾಶಿವಯೊಗಿಗಳು: ನಮ್ಮಿಂದ ಮರೆಯಾದ ಸತ್ಯಶೋಧಕ

1 min read

ಕೃಪೆ – ಹಿಂಡವಿ

ನಮ್ಮ ನಡುವಿನ ಸಾಧಕರು:

ಪೀರ ಕರೀಮರ ಬಾಳಲ್ಲೂ ಬೆಳಕು ಮೂಡಿಸಿದ ಸದಾಶಿವಯೊಗಿಗಳು: ನಮ್ಮಿಂದ ಮರೆಯಾದ ಸತ್ಯಶೋಧಕ

 

ಹಂಪಿ ವಿರೂಪಾಕ್ಷ ದೇವಸ್ಥಾನದ ಹಿಂಬದಿಯಲ್ಲಿ, ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿಯ ಅಂಚಿನಲ್ಲಿ ಸದಾಶಿವ ಯೋಗಿಗಳ ಆಶ್ರಮ. ಚಿಕ್ಕ ಬಾಗಿಲು ದಾಟಿ ಒಳ ಪ್ರವೇಶಿಸುತ್ತಿದ್ದಂತೆಯೇ ಬೋರ್ಡು; “ಕಾಲಿಗೆ ಬಿದ್ದು ನಮಸ್ಕರಿಸುವುದನ್ನು ನಿಷೇಧಿಸಲಾಗಿದೆ”. ಹಂಪಿ ವಾಸಿಗಳ ಪಾಲಿಗೆ “ಆಶ್ರಮದ ತಾತ” ಎಂದೇ ಹೆಸರಾಗಿದ್ದ ಇವರದು ಶುದ್ಧ ಬಿಳಿಯ ಉಡುಗೆ. ನೀಳಕಾಯಕ್ಕೊಪ್ಪುವ ನೀಳ ಗಡ್ಡ. ಸದಾ ಪ್ರಖರ ಕಣ್ಣುಗಳಲ್ಲಿ ಮಿನುಗುವ ತೇಜಸ್ಸು. 

 

1996-97ರ ಸುಮಾರು ಇರಬೇಕು. ಸಂಪೂರ್ಣ ಸಾಕ್ಷರತಾ ಆಂದೋಲನದ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ನಾವು ಕ್ರಿಯಾಶೀಲರಾಗಿದ್ದ ದಿನಗಳವು. “ಅಕ್ಷರ ವಿಜಯ” ದ ನವಸಾಕ್ಷರರ ಪೂರಕ ಪಠ್ಯ ರಚನೆಗಾಗಿ ಬಳ್ಳಾರಿ ಜಿಲ್ಲೆಯ ಸಾಹಿತಿ ಬರಹಗಾರರು ಕೆಲದಿನ ಇದೇ ಆಶ್ರಮದಲ್ಲಿ ತಂಗಿದ್ದೆವು. ಆಗಲೇ ನನಗೆ ಈ ಯೋಗಿಗಳನ್ನು ಹತ್ತಿರದಿಂದ ಕಾಣುವಂತಾದದ್ದು. ಸ್ವಾಮೀಜಿ, ಯೋಗಿಗಳು ಎನ್ನುವವರು ಹೀಗೆಯೂ ಇರುತ್ತಾರೆ ಎಂಬುದು ಮನವರಿಕೆಯಾದದ್ದು. 

ಆ ನಂತರವಷ್ಟೇ ನಮ್ಮ ಬಂಡಾಯದ ಹಿರಿಯರ ಮೂಲಕವೇ ನನಗೆ ಇವರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದು ಶಿವಯೋಗಿಗಳ ಬಗ್ಗೆ ಗೌರವವನ್ನು ಹೆಚ್ಚಿಸಿಕೊಂಡೆ. ನಿಜವೆಂದರೆ ಇವರು ಧರ್ಮ, ಧಾರ್ಮಿಕ ವ್ಯವಸ್ಥೆಯ ಒಳಗಿನ ಬಂಡಾಯಗಾರರು. ಸ್ವರ್ಗ, ನರಕ, ಪಾಪ ಪುಣ್ಯ, ಮಠೀಯತೆ, ಪೂಜೆ, ಸಮಾರಾಧನೆ, ಅವತಾರ, ಪವಾಡಗಳು, ಎಲ್ಲವನ್ನೂ ಸ್ಪಷ್ಟ ತಿಳುವಳಿಕೆಯ ಮೂಲಕ ನಿರಾಕರಿಸುವ ಖಚಿತತೆ ಇವರದಾಗಿತ್ತು. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲೆಂದು ಹಿಮಾಲಯಕ್ಕೆ ಹೋಗಿ, ಧ್ಯಾನ ಸಾಧನೆ ಮಾಡಿ, ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡು ಮರಳಿದ್ದರು. ಇವರ ಈ ಜ್ಞಾನ ಕಾರಣದಿಂದಾಗಿಯೇ ವಿಚಾರವಾದಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. 

 

ಸದಾಶಿವಯೋಗಿಗಳು ಲೇಖಕರೂ ಆಗಿದ್ದರು. “ಶಿರವೇ ಬ್ರಹ್ಮಾಂಡ ಜಗವೇ ಪಿಂಡಾಂಡ”, ” ಭಾರತೀಯರಿಗೆ ಭಗವಂತರೆಷ್ಟು” “ಶೈವ ತತ್ವ” ಕೃತಿಗಳನ್ನು ಇವರು ರಚಿಸಿದ್ದರು. ಭಾರತೀಯರಿಗೆ ಭಗವಂತರೆಷ್ಟು ಕೃತಿಯ ಕುರಿತು ಕೃದ್ಧರಾದ ಮತಾಂಧರು ಇವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದರೂ ಕ್ಷಮೆ ಕೇಳದೇ ತಮ್ಮ ವೈಚಾರಿಕತೆಯನ್ನು ಸಮರ್ಥಿಸಿಕೊಂಡಿದ್ದರು. 

ಕನ್ನಡ ವಿಶ್ವವಿದ್ಯಾಲಯ ಆರಂಭದ ದಿನಗಳಲ್ಲಿ ಮೊದಲ ಕುಲಪತಿಗಳಾಗಿ ನಿಯುಕ್ತರಾದ ಚಂದ್ರಶೇಖರ ಕಂಬಾರರು ಸದಾಶಿವಯೋಗಿಗಳೊಂದಿಗೆ ಚರ್ಚಿಸಿ ಸಲಹೆ ಮಾರ್ಗದರ್ಶನಗಳನ್ನು ಪಡೆದಿದ್ದರು. ರಂಜಾನ್ ದರ್ಗಾ ಅವರಿಗಂತೂ ಇವರ ಬಗ್ಗೆ ಅಪಾರ ಗೌರವ. ನನ್ನ ಕವನ ಸಂಕಲನ “ಜಾಲಿ ಹೂಗಳ ನಡುವೆ”ಯನ್ನು ತಮ್ಮ ಲೋಹಿಯಾ ಪ್ರಕಾಶನದ ಮೂಲಕ ಪ್ರಕಟಿಸಿದ ಸಿ.ಚನ್ನಬಸವಣ್ಣ ಅವರು ಸದಾಶಿವಯೋಗಿಗಳ ಬಗ್ಗೆ ಪುಸ್ತಕ ಬರೆದುಕೊಡುವಂತೆ ಆಗಲೇ ಕೆಲಸ ಒಪ್ಪಿಸಿದ್ದರು. ಒಪ್ಪಿಕೊಂಡ ನಾನು ಒಂದೆರಡು ಬಾರಿ ಆಶ್ರಮಕ್ಕೆ ಹೋಗಿ, ಕುಳಿತು ಮಾತಾಡಿಕೊಂಡೂ ಬಂದಿದ್ದೆ. ನಿಜವೆಂದರೆ ಆ ದಿನಗಳಲ್ಲಿ ಅಂತಹ‌ ಸಾಧಕರೊಂದಿಗೆ ವ್ಯವಧಾನದಿಂದ ಕುಳಿತುಕೊಳ್ಳುವ ವಯಸ್ಸಾಗಲಿ, ಅವರನ್ನು ಸಂದರ್ಶಿಸಲು ಬೇಕಾದ ಕನಿಷ್ಟ‌ ಜ್ಞಾನ ತರಬೇತಾಗಲಿ ನನಗಿರಲಿಲ್ಲ. ಹಿಡಿದ ಕೆಲಸ ಅರ್ಧಕ್ಕೇ ಬಿಟ್ಟಿದ್ದೆ. ಆದರೆ ಹಂಪಿಗೆ ಯಾವಾಗ ಹೋದರೂ ಆ ಆಶ್ರಮದ ದಾರಿಯಲ್ಲಿ ಸುತ್ತಾಡುವ, ಅದರ ಬಳಿ ಹಾಯುವ ಆಕರ್ಷಣೆ ಕಡಿಮೆಯಾಗಿರಲಿಲ್ಲ. ಕಳೆದ ಎರಡು ದಶಕದಿಂದೀಚೆಗೆ ತಾತನವರ ಆಶ್ರಮ ಕನ್ನಡ ವಿಶ್ವವಿದ್ಯಾಲಯದ ಹಿಂಭಾಗದ ಅರೆಕಾಡಿಗೆ ಸ್ಥಳಾಂತರಗೊಂಡಿತ್ತು. ಇತ್ತೀಚೆಗೆ ವಯೋಸಹಜ ಕಾರಣಗಳಿಂದಾಗಿ ಹೆಚ್ಚು ಓಡಾಡುತ್ತಿಲ್ಲ, ಮೆತ್ತಗಾಗಿದ್ದಾರಂತೆ” ಎಂಬ ಮಾತನ್ನು ಕೇಳುತ್ತಲೆ ಇದ್ದೆ.  

 

ಸದಾಶಿವಯೋಗಿಗಳಿಗೂ ನನ್ನ ಬಾಳ್ವೆಗೂ ಇರುವ ನಂಟಿನ ಬಗ್ಗೆಯೂ ಹೇಳಲೇಬೇಕು. ನನಗೆ ತನ್ನ ತಂಗಿಯನ್ನು ಕೊಟ್ಟು ಮದುವೆ ಮಾಡಿದ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ ನೌಕರರಾದ ಪಿ.ಕರೀಮ್, ಸದಾಶಿವಯೋಗಿಗಳ ನೇರ ಸೇವೆಗೈದ ಶಿಷ್ಯ. ಹಂಪಿಯ ಬೀದಿಗಳಲ್ಲಿ ಐಸ್ ವ್ಯಾಪಾರ ಮಾಡಿ, ಸಾಲು ಮಂಟಪಗಳಲ್ಲಿ ಬದುಕನ್ನು ಕಟ್ಟಿಕೊಂಡ ಕೆಲಸಗಾರನ ಮಗನಿಗೆ, ಓದಲು ತಮ್ಮ ಆಶ್ರಮದಲ್ಲಿ ಜಾಗನೀಡಿ ಆಶ್ರಯವನ್ನು ನೀಡಿದವರು ಸದಾಶಿವಯೋಗಿಗಳು. ಮನೆಗಿಂತ ಹೆಚ್ಚಾಗಿ ಆಶ್ರಮದಲ್ಲೇ ಇರುತ್ತಿದ್ದ ಈ ಹುಡುಗ ಎಸ್.ಎಸ್.ಎಲ್.ಸಿ ಮುಗಿಸುತ್ತಲೇ ಕುಲಪತಿ ಕಂಬಾರರಿಗೆ ಹೇಳಿ ಕೆಲಸ ಕೊಡಿಸಿದವರು ಈ ಪುಣ್ಯಾತ್ಮರು. ನೌಕರಿ ಕೊಡಿಸುವ ಮೂಲಕ ಈ ಕುಟುಂಬದ ಸಮಗ್ರ ಏಳಿಗೆಗೆ ಕಾರಣರಾದ ಸದಾಶಿವಯೋಗಿಗಳು ಈ ಕುಟುಂಬದ ಪಾಲಿಗೆ ದೈವ ಸಮಾನರು. ಕುಟುಂಬದ ಎಲ್ಲರ ಬಾಯಲ್ಲಿ ತಾತ ಎಂದೇ ಕರೆಯಲ್ಪಡುವ ಇವರ ಫೋಟೋ ಇವತ್ತಿಗೂ ಕರೀಂ ಅವರ ಮನೆಯ ಹಾಲ್ ನಲ್ಲಿದೆ. ನೌಕರಿ ಬಂದು ಎರಡು ದಶಕಗಳೇ ಕಳೆದರೂ ತಾತನವರ ಸೇವೆ ಮಾಡುತ್ತಲೇ ಇದ್ದ ಕರೀಂ ಇತ್ತೀಚೆಗಷ್ಟೇ ಯೋಗಿಗಳು ಕೃಶವಾಗಿದ್ದಾರೆ ಎಂಬ ಮಾತನ್ನು ಹೇಳಿದ್ದರು.

 

ನನ್ನ ಮಡದಿಯ ಪಾಲಿಗೆ ಪ್ರಾತಃಸ್ಮರಣೀಯರು ಸದಾಶಿವಯೋಗಿಗಳು. “ತಾತನವರ ಉಪಕಾರ ಇಲ್ಲದೇ ಹೋಗಿದ್ದರೆ ಈ ಹೊತ್ತಿಗೆ ನಮ್ಮ ಬದುಕು ಏನಾಗಿರುತ್ತಿತ್ತೋ, ಅವರಿಂದಲೇ ನಾವೆಲ್ಲ ಇಷ್ಟು ಕಾಣಲು ಸಾಧ್ಯವಾಯ್ತು” ಎಂದು ಸ್ಮರಿಸುವ ಈಕೆ “ಒಂದು ಸಲ ಹೋಗಿ ಮಾತಾಡಿಸಿಕೊಂಡು ಬರೋಣ” ಎಂದು ಹೇಳುತ್ತಲೇ ಇದ್ದಳು. ಆದರೆ ಹೋಗಲಾಗದ ನಮಗೆ ಅವರು “ಹೋದ” ಸುದ್ದಿ ಕೇಳುವಂತಾಯ್ತು. ನಾವು ಮದುವೆಯಾದ ಹೊಸತರಲ್ಲಿ, ಕಾರಟಗಿಯ ನಮ್ಮ ಮನೆಗೂ ತಮ್ಮ ಶಿಷ್ಯಬಳಗದೊಂದಿಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿದ್ದರು ಯೋಗಿಗಳು. ಸದಾಶಿವಯೋಗಿಗಳನ್ನು ಮರೆಯಲಾದೀತೇ?

 

-ಪೀರ್‌ ಬಾವಾಜಿ, ಪ್ರಗತಿಪರ ಚಿಂತಕ, ಸಾಹಿತಿ ಕಾರಟಗಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd