Santosh Trophy : 54 ವರ್ಷಗಳ ಬಳಿಕ ಕರ್ನಾಟಕ ಫುಟ್ಬಾಲ್ ತಂಡ ಚಾಂಪಿಯನ್…
ಬರೋಬ್ಬರಿ 54 ವರ್ಷಗಳ ಬಳಿಕ ಕಾಯುವಿಕೆ ಕೊನೆಗೊಂಡಿದೆ. ಕರ್ನಾಟಕ ತಂಡ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಪಟ್ಟವನ್ನ ಅಲಂಕರಿಸಿದೆ. 76ನೇ ಆವೃತ್ತಿಯ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯಲ್ಲಿ ಶನಿವಾರ ಮೇಘಾಲಯ ವಿರುದ್ಧ 3-2 ಗೋಲುಗಳ ರೋಚಕ ಹಣಾಹಣಿಯ ನಂತರ ಕರ್ನಾಟಕ ಹೊಸ ಇತಿಹಾಸ ದಾಖಲಿಸಿದೆ.
ಕರ್ನಾಟಕ ಪುಟ್ಬಾಲ್ ತಂಡ 46 ವರ್ಷಗಳ ಬಳಿಕ ಪೈನಲ್ ತಲುಪಿತ್ತು. ಮೊದಲೆರಡು ನಿಮಿಷದಲ್ಲೇ ಸುನಿಲ್ ಕುಮಾರ್ ರಾಜ್ಯಕ್ಕೆ ಮೊದಲ ಗೋಲು ತಂದುಕೊಟ್ಟರು. 8ನೇ ನಿಮಿಷದಲ್ಲಿ ಕರ್ನಾಟಕದ ಆಟಗಾರ ಪೌಲ್ ಮಾಡಿದ ಕಾರಣ, ಮೇಘಾಲಯಕ್ಕೆ ಪೆನಾಲ್ಟಿ ದೊರೆಯಿತು. 9ನೇ ನಿಮಿಷದಲ್ಲಿ ಬ್ರೊಲಿಂಗ್ಟನ್ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು.
19ನೇ ನಿಮಿಷದಲ್ಲಿ ಬೀಕೆ ಓರಮ್ ಮತ್ತು 44ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಮೂಲಕ ರಾಬಿನ್ ಯಾದವ್ ಅತ್ಯಾಕರ್ಷಕ ಗೋಲು ದಾಖಲಿಸಿದರು. ಮೊದಲಾರ್ಧದ ಅಂತ್ಯಕ್ಕೆ ಕರ್ನಾಟಕ 3-1ರ ಮುನ್ನಡೆ ಪಡೆಯಿತು.
ದ್ವಿತೀಯಾರ್ಧದಲ್ಲಿ ಮೇಘಾಲಯ ಟಫ್ ಫೈಟ್ ನೀಡತೊಡಗಿತು. 60ನೇ ನಿಮಿಷದಲ್ಲಿ ಶೀನ್ ಸ್ಟೀವನ್ಸನ್ ಗೂಲುಬಾರಿಸಿದರು. 2-3 ಅಂತರದ ನಡುವೆ ಕೊನೆ 20 ನಿಮಿಷ ಭಾರೀ ಪೈಪೋಟಿಯಿಂಡ ಕೂಡಿತ್ತು. ಆದರೆ ಗೋಲು ದಾಖಲಾಗಲಿಲ್ಲ. ಚೊಚ್ಚಲ ಬಾರಿಗೆ ಫೈನಲ್ಗೇರಿದ್ದ ಮೇಘಾಲಯದ ಪ್ರಶಸ್ತಿ ಕನಸು ಭಗ್ನಗೊಂಡರೆ, ರಾಜ್ಯದ ಆಟಗಾರರು ಕುಣಿದು ಸಂಭ್ರಮಿಸಿದರು.
CHAMPIONS. ಬಾರಿಸು ಕನ್ನಡ ಡಿಂಡಿಮವ! 🟡🔴#SantoshTrophy #Karnataka#HeroSantoshTrophy #IndianFootball
pic.twitter.com/Pmr6K7aYuK— Mal-Lee (@MallikarjunaNH) March 5, 2023
ಮೈಸೂರು ಸಂಸ್ಥಾನವಿದ್ದಾಗ 4 ಟ್ರೋಫಿ
ಕರ್ನಾಟಕಕ್ಕೆ ಇದು ಒಟ್ಟಾರೆ 5ನೇ ಟ್ರೋಫಿ. ಈ ಹಿಂದೆ ಮೈಸೂರು ಸಂಸ್ಥಾನವಿದ್ದಾಗ ರಾಜ್ಯ 4 ಬಾರಿ ಟ್ರೋಫಿ ಎತ್ತಿಹಿಡಿದಿತ್ತು. 1946-47ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದ ಮೈಸೂರು ತಂಡ, 1952-53, 1967-68, 1968-69ರಲ್ಲಿ ಪ್ರಶಸ್ತಿ ಜಯಿಸಿತ್ತು. ಇದಕ್ಕೂ ಮುನ್ನ 1975-76ರಲ್ಲಿ ಫೈನಲ್ ಪ್ರವೇಶಿಸಿದ್ದ ಕರ್ನಾಟಕ, ಬಂಗಾಳ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
Santosh Trophy: After 54 years Karnataka Football Team Champion…