ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ರಾಜಕೀಯ ಕದನವು ಇದೀಗ ಕಾಂಗ್ರೆಸ್ ಪಕ್ಷದ ಒಳಗೇ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಇದಕ್ಕೆಲ್ಲ ತಳಹದಿಯಾಗಿ 2023ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು, ಕಾಂಗ್ರೆಸ್ ಪಕ್ಷದ ಗೆಲುವು, ಮತ್ತು ನಂತರದ ಸರ್ಕಾರ ರಚನೆಗೆ ಸಂಬಂಧಿಸಿದ ತೀರ್ಮಾನಗಳು ಕಾರ್ಯನಿರ್ವಹಿಸಿವೆ.
ಅದು 2023… ಮೇ 18.. ಜಿದ್ದಾಜಿದ್ದಿನ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು.. ಕಾಂಗ್ರೆಸ್ ಪಕ್ಷ ಇತಿಹಾಸದ ಗೆಲುವು ಸಾಧಿಸಿ ಮತ ಯುದ್ಧ ಗೆದ್ದಿತ್ತು.. ಸೋತು ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಗೆ ಕರ್ನಾಟಕ ಗೆಲುವು ಬೂಸ್ಟ್ ಕೊಟ್ಟಿತ್ತು.. ಆದ್ರೆ ಪಕ್ಷ ಅಧಿಕಾರಕ್ಕೆ ಬಂದು ಸಿಎಂ ಯಾರು ಅನ್ನೋ ಪ್ರಶ್ನೆಗೆ ದಿಲ್ಲಿಯಲ್ಲಿ ದೊಡ್ಡ ನಾಟಕವೇ ನಡೀತು.. ತುಟಿ ಬಿಚ್ಚದೆ ಸಿದ್ದರಾಮಯ್ಯ ದಾಳ ಉರುಳುಸ್ತಾ ಇದ್ರು.. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಣ್ಣೀರಾಕಿ ಕೂಲಿ ಕೇಳ್ತಾ ಇದ್ರು.. ನಾನು ಅಧ್ಯಕ್ಷ ನನ್ನ ನಾಯಕತ್ವ ಅನ್ನೋ ಮಾತು ಪದೇ ಪದೇ ಕೇಳಿ ಬರ್ತಾ ಇತ್ತು.. ಆದ್ರೆ ಡಿಕೆ ಎದುರು ಇದ್ದದ್ದು ಕರ್ನಾಟಕದ ಅಹಿಂದ ಚಾಂಪಿಯನ್ ಸಿದ್ದರಾಮಯ್ಯ.. ಸಿದ್ದಣ್ಣನ ಗತ್ತು ತಾಕತ್ತು ಏನು ಅಂತಾ ಡಿಕೆ ಹಾದಿಯಾಗಿ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಗೊತ್ತಿತ್ತು..
ಮತ್ತೊಂದು ಕಡೆ ಕಾಂಗ್ರೆಸ್ ಹೈ ಕಮಾಂಡ್ ಗೆ ಯಾವುದೇ ಗೊಂದಲ ಇಲ್ದೆ ಸಮಸ್ಯೆ ಬಗೆಹರಿಸೋ ಆತುರ.. ಹೈಕಮಾಂಡ್ ಮೊದಲಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಎಂಬ ರಾಜಕೀಯ ಫಾರ್ಮುಲಾವನ್ನು ರಚಿಸಿ ರಾಜ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿತು… ಈ ಧರ್ಮ ಸಂಕಷ್ಟದಲ್ಲಿ ಹೈ ಕಮಾಂಡ್ ನಾಯಕರು ಹೆಣೆದ ಸೂತ್ರವೇ ಸಿದ್ದರಾಮಯ್ಯ ಸಿಎಂ, ಡಿಕೆ ಡಿಸಿಎಂ ಪ್ಲಸ್ ಕೆಪಿಸಿಸಿ ಅಧ್ಯಕ್ಷ ಹುದ್ದೆ..
ಮೇ 18 ನೇ ತಾರೀಕು.. ರಾಹುಲ್ ಗಾಂಧಿ ಮುಂದೆ ಮಂಥನ ನಡೀತು.. ಅದಾದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿದ್ರು.. ಈ ವೇಳೆ ನಮ್ಮಲ್ಲಿ ಗೊಂದಲ ಇಲ್ಲ.. ಸಿದ್ದರಾಮಯ್ಯ ಸಿಎಂ, ಡಿ.ಕೆ. ಡಿಸಿಎಂ ಮತ್ತು ಮುಂದಿನ ಲೋಕಸಭಾ ಚುನಾವಣೆವರೆಗೂ ಅವ್ರೆ ಕೆಪಿಸಿಸಿ ಕ್ಯಾಪ್ತಾನ್ ಅಂದ್ರು.. ಅಲ್ಲಿಗೆ ಸರ್ಕಾರದಲ್ಲಿ ನಂಬರ್ 2 ಸ್ಥಾನ.. ಪಕ್ಷದಲ್ಲಿ ನಂಬರ್ 1 ಸ್ಥಾನಕ್ಕೆ ಡಿಕೆ ತೃಪ್ತಿ ಆದ್ರು..
ಪಂಚ ಗ್ಯಾರಂಟಿ ಸದ್ದಿನೊಂದಿಗೆ ಲೋಕಸಭಾ ಚುನಾವಣೆಗೆ ಹೋದ ಕಾಂಗ್ರೆಸ್ ಗೆ ನಿರಾಸೆ ಆಯ್ತು.. ಅಂದುಕೊಂಡಷ್ಟು ಸೀಟು ಕೈಗೆ ಬರ್ಲಿಲ್ಲ.. ಇಲ್ಲಿವರೆಗೂ ಒಂದಿಷ್ಟು ಗೊಂದಲದ ನಡುವೆ ಎಲ್ಲವೂ ಚೆನ್ನಾಗಿತ್ತು.. ಆಗಾಗ ಹೆಚ್ಚುವರಿ ಡಿಸಿಎಂ ಮಾತು ಬಂದ್ರೂ ಹೆಚ್ಚು ಸದ್ದು ಮಾಡಲಿಲ್ಲ.. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತು ಬಂದ್ರೂ, ಹೈಕಮಾಂಡ್ ಸೊಪ್ಪಾಕಿಲ್ಲ, ಆದ್ರೆ ಈಗ ಸೀನ್ ಬದಲಾಗಿದೆ.. ಸಿಎಂ ಕುರ್ಚಿ ಕಾಳಗದ ನಡುವೆ ಕೆಪಿಸಿಸಿ ಕ್ಯಾಪ್ತನ್ಸಿ ಫೈಟ್ ಜೋರಾಗಿದೆ.. ಇದಕ್ಕೆ ಕಾರಣ ಸೈಲೆಂಟ್ ಮ್ಯಾನ್ ಸತೀಶ್ ಜಾರಕಿಹೊಳಿ..
ಹೌದು.. ಕಾಂಗ್ರೆಸ್‌ನಲ್ಲಿ ಪಟ್ಟಕ್ಕಾಗಿ ನಡೆಯುತ್ತಿರುವ ಫೈಟ್ ಈಗ ಹೊಸ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡೆವೆ ನಡೆಯುತ್ತಿದ್ದ ಕುರ್ಚಿ ಕದನ.. ಈಗ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಕಡೆ ತಿರುಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲೇಬೇಕು ಎಂದು ಸಾಹುಕಾರ್ ಪಟ್ಟು ಹಿಡಿದು ಕುಳಿತಿದ್ದಾರೆ. ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಇವರಿಬ್ಬರ ಜಗಳ ಈಗ ಸ್ಫೋಟಗೊಂಡಿದೆ. ಇವರಿಬ್ಬರ ಕಾದಾಟ ಈಗ ಕಾಂಗ್ರೆಸ್ ಪಾಳೆಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.. ಇಷ್ಟು ದಿನ ತಾನಾಯ್ತು ತಮ್ಮ ಪಾಡಾಯ್ತು ಅಂತ ಇದ್ದ ಸೈಲೆಂಟ್ ಸತೀಶ್ ಜಾರಕಿಹೊಳಿ ವೈಲೆಂಟ್ ಆಗಿದ್ದಾರೆ.. ಸಿಟಿ ರವಿ ಪ್ರಕರಣದಲ್ಲಿ ಯಾವಾಗ ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ರೋ ನೋಡಿ ಅಲ್ಲಿಂದ ಸಾಹುಕಾರ್ ಯುದ್ಧವನ್ನು ಘೋಷಿಸಿ ಬಿಟ್ಟಿದ್ದಾರೆ..
ಬಹಿರಂಗವಾಗಿ ಡಿಕೆಶಿ ಅವರ ಅಧಿಕಾರಕ್ಕೆ ಸವಾಲು ನೀಡಲು ಸತೀಶ್ ಹೈಕಮಾಂಡ್ ಮುಂದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಪ್ರಸ್ತಾಪವನ್ನು ಬಿಗಿಯಾಗಿ ಮುಂದಿಟ್ಟಿದ್ದಾರೆ. ಪಕ್ಷದಲ್ಲಿ ದಕ್ಷತೆ ಮತ್ತು ಪ್ರಭಾವ ಹೊಂದಿರುವ ಹೊಸ ನಾಯಕನ ಅಗತ್ಯವನ್ನು ಮುಂದಿಟ್ಟಿದ್ದಾರೆ.. ಡಿಕೆ ಶಿವಕುಮಾರ್ ಬದಲಾವಣೆ ಆಗಲೇಬೇಕು ಅಂತ ಪಟ್ಟು ಹಿಡಿದು ಕುಳಿತಿದ್ದಾರೆ..
ಅಂದಹಾಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಅಸಮಾಧಾನವನ್ನು ತಣಿಸಲು ಸುರ್ಜೇವಾಲಾ ರಾಜ್ಯಕ್ಕೆ ಬಂದಿದ್ದರು, ಸರಣಿ ಸಭೆ ಮಾಡಿ ಶಾಸಕರು, ಸಚಿವರಿಗೆ ಕಿವಿ ಮಾತು ಹೇಳಿದ್ದರು.. ಪಕ್ಷ ತಾಯಿ ಇದ್ದಂತೆ.. ಸರ್ಕಾರ ಮಗು ಇದ್ದಂತೆ ಅಂತಾ ಶಿಸ್ತಿನ ಪಾಠ ಮಾಡಿ ಎಲ್ಲರಿಗೂ ವಾರ್ನ್ ಮಾಡಿದ್ರು.. ಆದ್ರೆ ಅದೇಲ್ಲ ಎಚ್ಚರಿಕೆ ಸಭೆಗೆ ಮಾತ್ರ ಸೀಮಿತವಾದಂತೆ ಇದೆ.. ಸುರ್ಜೇವಾಲಾ ಎಚ್ಚರಿಕೆಗೂ ಸತೀಶ್ ಜಾರಕಿಹೊಳಿ ಡೋಂಟ್ ಕೇರ್ ಅಂದಿದ್ದಾರೆ..
ನಮ್ಗೆ ಹೊಸ ಕೆಪಿಸಿಸಿ ಅಧ್ಯಕ್ಷರು ಬೇಕು, ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಶಾಸಕರ ಅಭಿಪ್ರಾಯ ಆಲಿಸಿ, ಅಧ್ಯಕ್ಷರ ಬದಲಾವಣೆ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹ ಆಗಬೇಕು, ಅಭಿಪ್ರಾಯ ಆಲಿಸಿ ಹೈಕಮಾಂಡ್ ತೀರ್ಮಾನಿಸಬೇಕು ಅಂತಾ ಬಿಗಿ ಪಟ್ಟು ಹಿಡಿದ್ದಾರೆ..
ಅಲ್ಲದೆ ಸುರ್ಜೇವಾಲರನ್ನು ಸತೀಶ್ ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಅವರು, ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ. ಸದ್ಯ ಡಿಕೆ ಶಿವಕಮಾರ್ ಅವರು ಅಧ್ಯಕ್ಷರಾಗಿದ್ದು, ಇವರನ್ನೇ ಮುಂದುವರಿಸುವುದಾದರೆ ಅದನ್ನು ಸ್ಪಷ್ಟಪಡಿಸಿ ಅಂತ ಹೇಳಿದ್ದೇನೆ. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ಮತ ಸೆಳೆಯುವವರನ್ನು ಹಾಗೂ ವರ್ಚಸ್ಸು ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಿದ್ದೇನೆ. ಪಕ್ಷದ ಸಂಘಟನೆಯ ದೃಷ್ಟಿಯಿಂದ 2023 ರಲ್ಲಿ ಇದ್ದ ವೇಗ ಕುಂಠಿತವಾಗಿದೆ. ಲೋಕಸಭೆ ಚುನಾವಣೆ ಆದಮೇಲೆ ಅಧ್ಯಕ್ಷರನ್ನು ಬದಲಾವಣೆ ಮಾಡ್ತೀವಿ ಎಂಬುದು ಎಐಸಿಸಿ ನೋಟ್ ಇದೆ. ಕೆಸಿ ವೇಣುಗೋಪಾಲ ಅವರೇ ಬರೆದ ನೋಟ್ ಇದೆ. ಲೋಕಸಭೆ ಚುನಾವಣೆ ಮುಗಿದು ಆರು ತಿಂಗಳ ಮೇಲಾಯಿತು. ಅದನ್ನು ಜಾರಿಗೆ ಅನುಷ್ಟಾನಕ್ಕೆ ತರಬೇಕಲ್ವಾ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಅಲ್ಲಿಗೆ ಬೆಳಗಾವಿ ಸಾಹುಕಾರ್ ರ ಟಾರ್ಗೆಟ್ ಸ್ಪಷ್ಟ.. ಅದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡ್ಬೇಕು.. ಅಲ್ಲಿದ್ರಲ್ಲಿ ಅವ್ರೇ ಕೂತ್ಕೋಬೇಕು..
ತಮ್ಮ ಗುರಿ ಬಗ್ಗೆ ಸ್ಪಷ್ಟತೆ ಹೊಂದಿರುವ ಸತೀಶ್ ಜಾರಕಿಹೊಳಿ, ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಲಿದ್ದಾರೆ. ಜನವರಿ 27 ಅಥವಾ 28ರಂದು ದೆಹಲಿಗೆ ಹೈಕಮಾಂಡ್ ನಾಯಕರ ಭೇಟಿ ಮಾಡಿ ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಲಿದ್ದಾರೆ. ಅಲ್ಲಿಗೆ ಶತಾಯಗತಾಯ ಕೆಪಿಸಿಸಿ ಹುದ್ದೆ ಪಡಿಯಲೇಬೇಕು ಅಂತಾ ಸಾಹುಕಾರ್ ಪಣ ತೊಟ್ಟಿದ್ದಾರೆ.. ಹಾಗಾದ್ರೆ ಸತೀಶ್ ಜಾರಕಿಹೊಳಿ ಗುರಿ ಕೇವಲ ಕೆಪಿಸಿಸಿ ಸ್ಥಾನ ಮಾತ್ರಾನಾ..? ಅಧ್ಯಕ್ಷ ಹುದ್ದೆಗೆ ಸತೀಶ್ ಫೈಟ್ ನಡಿಸ್ತಿರೋದು ಯಾಕೆ.. ಅವರ ಲೆಕ್ಕಾಚಾರ ಏನು..? ಅಂತಾ ಗೊತ್ತಾಗಬೇಕಾದರೆ, ಸತೀಶ್ ಜಾರಕಿಹೊಳಿ ಮಹತ್ವಾಕಾಂಕ್ಷೆ ಬಗ್ಗೆ ನೀವು ತಿಳಿದುಕೊಳ್ಳಬೇಕು.. ಅದೇನು ಅಂತೀರಾ ಅದುವೇ.. ಕರ್ನಾಟಕ ಸಿಎಂ ಕುರ್ಚಿ… ಸತೀಶ್ ಜಾರಕಿಹೊಳಿ ಎಂಬ ಹೆಸರಿನ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುತ್ತೇನೆ.. ಅಂದ್ರೆ ರಾಜ್ಯದ ಸಿಎಂ ಆಗೋದು ಅವರ ಪರಮೋಚ್ಚ ಕನಸು..
ಆಗಾದ್ರೆ ಸತೀಶ್ ಜಾರಕಿಹೊಳಿ ಈಗ್ಲೇ ಸಿಎಂ ಸ್ಥಾನಕ್ಕೆ ಪೈಪೋಟಿ ಕೊಡ್ಬೊದಲ್ವಾ ಕೆಪಿಸಿಸಿ ಕುರ್ಚಿ ಯಾಕೆ ಅಂದ್ರೆ ಈಗ ಸಿಎಂ ಸ್ಥಾನದಲ್ಲಿ ಇರೋದು ಅವರ ಪ್ರೀತಿಯ ಗುರು ಸಿದ್ದಣ್ಣ.. ಸಿದ್ದಣ್ಣ ಸಿಎಂ ಆಗಿ ಇರೋರೆಗೂ ಸತೀಶ್ ಸಿಎಂ ಕುರ್ಚಿಯತ್ತ ಕಣ್ಣೆತ್ತಿ ಸಹ ನೋಡಲ್ಲ.. ಇದೆ ಕಾರಣಕ್ಕೆ ಸತೀಶ್ ಜಾರಕಿಹೊಳಿ ಆಗಾಗ ನಾನು ಈಗ ಫೈಟ್ ಮಾಡಲ್ಲ, 2028ಕ್ಕೆ ಫೈಟ್ ಮಾಡುತ್ತೇನೆ ಅಂತ ಹೇಳ್ತಾನೆ ಇರ್ತಾರೆ.. ಅಲ್ಲದೆ ಮೊನ್ನೆ ಶಿಗ್ಗಾಂವಿ ಉಪಚುನಾವಣೆಯಲ್ಲೂ ತನ್ನ ಶಕ್ತಿ ಏನು ಅಂತಾ ತೋರಿಸಿದ್ದರು, ಅಲ್ಪಸಂಖ್ಯಾತರನ್ನ ಸೆಳೆಯುವಲ್ಲಿ ಸಕ್ಸಸ್ ಆಗಿದ್ದರು. ಈಗ ಹಿಂದುಳಿದವರನ್ನ ಸೆಳೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಮೂಲಕ ಭವಿಷ್ಯದ ಅಹಿಂದ ಚಾಂಪಿಯನ್ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ.
ಕೊನೆ ಎರಡ್ಮೂರು ವರ್ಷವಾದರೂ ಸಿಎಂ ಆಗಬೇಕೆಂದು ಡಿಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಆದ್ರೆ, ಇದಕ್ಕೆ ಅಹಿಂದ ನಾಯಕರು ವಿರೋಧಿಸುತ್ತಿದ್ದಾರೆ. ಈಗ ಸದ್ಯಕ್ಕೆ ಅಂತರೂ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಅರಿತ ಸತೀಶ್ ಜಾರಕಿಹೊಳಿ, 2028ರ ಮೇಲೆ ಕಣ್ಣಿಟ್ಟಿದ್ದಾರೆ. 2028ಕ್ಕೆ ಸಿಎಂ ಆಗುತ್ತೇನೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಹೀಗಾಗಿ ಸತೀಶ್ ಜಾರಕಿಹೊಳಿ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿ ಇಮೇಜ್ ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದ ಮೊದಲಿಗೆ ಸತೀಶ್ ಜಾರಕಿಹೊಳಿ ಅವರ ಟಾರ್ಗೆಟ್ ಕೆಪಿಸಿಸಿ ಅಧ್ಯಕ್ಷರಾಗುವುದು.