ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಸಾಮೂಹಿಕ ನಾಯಕತ್ವ ಮತ್ತು ಕಾರ್ಯಕರ್ತರ ಬೆವರ ಹನಿ ಕಾರಣವೇ ಹೊರತು, ಇದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ. ಎಲ್ಲವೂ ನನ್ನಿಂದಲೇ ಆಗಿದೆ ಎಂದು ಬಿಂಬಿಸಿಕೊಳ್ಳುವುದು ತಪ್ಪು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾವಿರಾರು ಜನರು ದುಡಿದಿದ್ದಾರೆ. ಆದರೆ ಕೆಲವರು ಮಾತ್ರ ಗೆಲುವಿನ ಸಂಪೂರ್ಣ ಶ್ರೇಯಸ್ಸನ್ನು ತೆಗೆದುಕೊಳ್ಳುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಮಾಲಯ ಏರಿದ ತೇನ್ ಸಿಂಗ್ ಉದಾಹರಣೆ
ತಮ್ಮ ಮಾತಿಗೆ ಪುಷ್ಟಿ ನೀಡಲು ಸಚಿವರು ಐತಿಹಾಸಿಕ ಉದಾಹರಣೆಯೊಂದನ್ನು ನೀಡಿದರು. 1960ರಲ್ಲಿ ತೇನ್ ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಪತ್ರಿಕೆಗಳು ತೇನ್ ಸಿಂಗ್ ಹಿಮಾಲಯ ಏರಿದರು ಎಂದಷ್ಟೇ ಬರೆದವು. ಆದರೆ ಅವರ ಜೊತೆಗೆ ಇನ್ನೂ 14 ಜನರಿದ್ದರು ಎಂಬ ಸತ್ಯ ಮರೆಮಾಚಲ್ಪಟ್ಟಿತು. ಅವರ ಹೆಸರು ಎಲ್ಲಿಯೂ ಬರಲಿಲ್ಲ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿನ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಗೆಲುವಿನ ಹಿಂದೆ ಅನೇಕರ ಶ್ರಮವಿದ್ದರೂ ಹೆಸರು ಮಾತ್ರ ಒಬ್ಬರದ್ದೇ ಕೇಳಿಬರುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ಗೆಲುವಿನ ಶ್ರೇಯಸ್ಸು ಹೈಜಾಕ್ ಆಗಬಾರದು
ಮೊದಲ ಬಾರಿ ಆಯ್ಕೆಯಾಗಿ ಬಂದ ಶಾಸಕರು ಸೇರಿದಂತೆ ಅನೇಕ ಹಿರಿಯ ಶಾಸಕರು ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಪ್ರತಿಯೊಬ್ಬ ಶಾಸಕರು ಮತ್ತು ಕಾರ್ಯಕರ್ತರ ಶ್ರಮದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲರಿಗೂ ಸಮಾನ ಪ್ರಾಮುಖ್ಯತೆ ಸಿಗಬೇಕು. ಅಧಿಕಾರಕ್ಕೆ ಬರಲು ಎಲ್ಲರ ಸಹಕಾರ ಮತ್ತು ಸ್ವಂತ ಪರಿಶ್ರಮವೂ ಇದೆ. ಹೀಗಿರುವಾಗ ಗೆಲುವಿನ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾವು ಒಪ್ಪುವುದಿಲ್ಲ ಎಂದು ಜಾರಕಿಹೊಳಿ ಖಡಕ್ ಆಗಿ ಹೇಳಿದರು.
ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ
ಗೃಹ ಸಚಿವ ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಅವರು ಈ ಹಿಂದೆಯೂ ಈ ಮಾತು ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ, ಅವರು ಹೇಳಿದ್ದು ಸರಿಯಾಗಿದೆ. ಅಷ್ಟೇ ಏಕೆ, ನಾವು ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೇವೆ ಎಂದು ಬಹಿರಂಗವಾಗಿಯೇ ಹೇಳಿದರು.
ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿರುವುದು ಎಸ್ ಸಿ, ಎಸ್ ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳು. ಈ ಸಮುದಾಯಗಳ ಮತಗಳೇ ಪಕ್ಷದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಆದ್ದರಿಂದ ಈ ಸಮುದಾಯಗಳಿಗೆ ಅಧಿಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕಿದೆ ಎಂದು ಅವರು ಪ್ರತಿಪಾದಿಸಿದರು. ಸಚಿವರ ಈ ಹೇಳಿಕೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೊಂದು ಸುತ್ತಿನ ಅಧಿಕಾರ ಹಂಚಿಕೆಯ ಚರ್ಚೆಗೆ ಮುನ್ನುಡಿ ಬರೆದಂತಿದೆ.








