ಬೆಂಗಳೂರು: ಶಾಲಾ ಬಸ್ ಪಲ್ಟಿಯಾದ ಪರಿಣಾಮ ಐವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡಹಳ್ಳಿ ಹಾಗೂ ಗಂಗಸಂದ್ರ ಗ್ರಾಮದ ನಡುವೆ ನಡೆದಿದೆ.
ಎರಡೂ ಗ್ರಾಮದ ಮಧ್ಯೆ ಇರುವ ಕೆರೆ ಏರಿ ಮೇಲಿಂದ ಶಾಲಾ ವಾಹನ ಪಲ್ಟಿಯಾದ ಪರಿಣಾಮ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರದ ಪಾಲನಾ ಜೋಗಹಳ್ಳಿ ಬಳಿಯ ಬಿ.ಹೆಚ್. ಪಬ್ಲಿಕ್ ಶಾಲಗೆ ಸೇರಿದ ವಿದ್ಯಾರ್ಥಿಗಳು ಎನ್ನಲಾಗಿದೆ.
ಪಾಲ್ ಪಾಲ್ ದಿನ್ನೆ ಗ್ರಾಮದ ಮಗುವಿನ ತಲೆಗೆ ಗಂಭೀರ ಗಾಯಾವಾಗಿದ್ದು, ಗಂಗಸಂದ್ರ ಗ್ರಾಮದ ಓರ್ವ ಮಗುವಿನ ಕಾಲಿಗೆ ಪೆಟ್ಟಾಗಿದೆ. ಹಾಡೋನಹಳ್ಳಿಯ ಮೂವರು ವಿದ್ಯಾರ್ಥಿಗಳಿಗೆ ಕೂಡ ಗಾಯಗಳಾಗಿವೆ. ಅಪಘಾತ ಕಂಡು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.








