ನವದೆಹಲಿ : ಕೊರೊನಾ ಸೋಂಕು ಹರಡದಂತೆ ತಡೆಯಲು ದೇಶವನ್ನು ಲಾಕ್ ಡೌನ್ ಮಾಡಲಾಗಿತ್ತು. ಲಾಕ್ ಡೌನ್ ಸಡಿಲಕೊಂಡರೂ ಕೆಲ ಉದ್ಯಮಗಳನ್ನು ಶುರು ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್ ಸೇರಿದಂತೆ ಇನ್ನೂ ಕೆಲ ಉದ್ಯಮಗಳು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿಲ್ಲ. ಹಾಗಾಗಿ ಶಾಪಿಂಗ್ ಮಾಲ್ ಗಳಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಪಿಂಗ್ ಮಾಲ್ ಒಕ್ಕೂಟ,90 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಸರ್ಕಾರ ರೆಪೊ ದರ ಕಡಿತ, ಇಎಂಐ ಪಾವತಿ ವಿಸ್ತರಣೆ ಜೊತೆಗೆ ಇನ್ನೂ ಹಲವು ಆರ್ಥಿಕ ನೆರವು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಮಾತನಾಡಿದ ಶಾಪಿಂಗ್ ಸೆಂಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅಮಿತಾಬ್ ತನೆಜ, ಶಾಪಿಂಗ್ ಮಾಲ್ ಗಳು ನಗರ ಪ್ರದೇಶಗಳಲ್ಲಿ ಇರುತ್ತವೆ . ಅಲ್ಲದೆ ದೊಡ್ಡ ದೊಡ್ಡ ಉದ್ಯಮಿಗಳು ಮತ್ತು ವಿದೇಶಿ ಉದ್ಯಮಿಗಳು ಹೂಡಿಕೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ಕೆಲ ಶಾಪಿಂಗ್ ಮಾಲ್ ಗಳು ಹೊರತು ಪಡಿಸಿದರೇ ಬಹುತೇಕ ಮಾಲ್ ಗಳಿಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳು ಹೂಡಿಕೆ ಮಾಡಿರುತ್ತಾರೆ. ಅಲ್ಲದೆ ದೇಶದಲ್ಲಿರುವ 650ಕ್ಕೂ ಹೆಚ್ಚು ಶಾಪಿಂಗ್ ಸೆಂಟರ್ ಗಳಲ್ಲಿ 550ಕ್ಕೂ ಹೆಚ್ಚು ಸ್ಟಾಂಡ್ ಅಲೋನ್ ಡೆವೆಲಪರ್ ಗಳು ಒಡೆತನ ಹೊಂದಿವೆ. ಸಾವಿರಕ್ಕೂ ಹೆಚ್ಚು ಸಣ್ಣ ಶಾಪಿಂಗ್ ಸೆಂಟರ್ ಗಳು ಸಣ್ಣ ನಗರಗಳಲ್ಲಿವೆ. ಹಾಗಾಗಿ ಸರ್ಕಾರಗಳು ಶಾಪಿಂಗ್ ಮಾಲ್ ಉದ್ಯಮಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.








