ಕೊರೊನಾ ಸಂಕಷ್ಟ – ಕೋವಿಡ್ ವಾರಿಯರ್ಸ್ ಗಳ ನೆರವಿಗೆ ಬಂದ ಶ್ರೀಮುರುಳಿ
ಬೆಂಗಳೂರು : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಕಿಚ್ಚ ಸೂದೀಪ್ , ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ , ಸೋನು ಸೂದ್ , ಹೀಗೆ ಹಲವರು ಕಷ್ಟದ ಸಂದರ್ಭದಲ್ಲಿ ಸಹಾಯಾಸ್ತ ಚಾಚಿದ್ದಾರೆ.
ಮತ್ತೊಂದೆಡೆ ಅನೇಕ ಸೆಲೆಬ್ರಿಟಿಗಳು ಜೀವ ಕಳೆದುಕೊಂಡಿದ್ದಾರೆ.. ಇನ್ನೂ ಹಲವರು ತಮ್ಮರನ್ನ ಕಳೆದುಕೊಂಡ ದೂಃಖದಲ್ಲಿದ್ದಾರೆ. ಇನ್ನೂ ಅನೇಕರು ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ಕೋವಿಡ್ ವಾರಿಯರ್ಸ್ ನೆರವಿಗೆ ಧಾವಿಸಿದ್ದಾರೆ. ಕೊರೊನಾ ಫ್ರೆಂಟ್ ಲೈನ್ ಕೆಲಸಗಾರರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಶ್ರೀಮುರಳಿ ಆಹಾರ ವಿತರಿಸಿದ್ದಾರೆ. ಬೆಂಗಳೂರಿನ ಕೆಲವು ಆಸ್ಪತ್ರೆಗಳಿಗೆ ರೋರಿಂಗ್ ಸ್ಟಾರ್ ಆಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಸೋಂಕಿತರ ಸೇವೆ ಮಾಡುತ್ತಿರುವ ಬೆಂಗಳೂರಿನ 5 ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಆಹಾರ ವ್ಯವಸ್ಥೆ ಒದಗಿಸಿದ್ದಾರೆ.
ಕೆ.ಸಿ ಜನರಲ್ ಆಸ್ಪತ್ರೆ, ಇ ಎಸ್ ಐ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿ.ವಿ ರಾಮನ್ ಜನರಲ್ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಒದಗಿಸಿದ್ದಾರೆ.