ದಾವಣಗೆರೆ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಯುತ್ತಿದೆ ಎಂಬ ಊಹಾಪೋಹಗಳ ನಡುವೆಯೇ, ದಾವಣಗೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತ ಪ್ರಶ್ನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಶುಕ್ರವಾರ ನಗರದ ಎಂಬಿಎ ಮೈದಾನದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಿಎಂ ಸಿಡಿಮಿಡಿಗೊಂಡರು.
ದಿನ ಬೆಳಗಾದರೆ ನಿಮಗೆ ಇದೇ ಸುದ್ದಿನಾ?
ಮುಖ್ಯಮಂತ್ರಿಯವರು ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ, ಪತ್ರಕರ್ತರೊಬ್ಬರು ರಾಜ್ಯದಲ್ಲಿ ಬರೀ ಸಿಎಂ ಕುರ್ಚಿದ್ದೇ ಚರ್ಚೆ. ಇದಕ್ಕೆ ಮುಕ್ತಿ ಇಲ್ಲವೇ ಸರ್ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಸಂಯಮ ಕಳೆದುಕೊಂಡ ಮುಖ್ಯಮಂತ್ರಿಗಳು, ಮಾಧ್ಯಮದವರ ವಿರುದ್ಧವೇ ಹರಿಹಾಯ್ದರು.
ನಿಮಗೆ ದಿನ ಬೆಳಗಾದರೆ ಸಿಎಂ ಕುರ್ಚಿ ಬಿಟ್ಟರೆ ಬೇರೆ ಸುದ್ದಿಗಳು ಇಲ್ಲವೇ? ರಾಜ್ಯದ ಅಭಿವೃದ್ಧಿ, ಜನಪರ ಯೋಜನೆಗಳ ಬಗ್ಗೆ ಕೇಳಲು ವಿಷಯಗಳಿಲ್ಲವೇ ಎಂದು ಮರುಪ್ರಶ್ನೆ ಹಾಕುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರು. ಪತ್ರಕರ್ತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲು ನಿರಾಕರಿಸಿದ ಅವರು, ತೀವ್ರ ಅಸಮಾಧಾನದಿಂದಲೇ ಅಲ್ಲಿಂದ ತೆರಳಿದರು. ಇದೇ ವೇಳೆ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಗೆ ವರಿಷ್ಠರಿಂದ ಕರೆ ಬಂದಿದ್ದು, ತಾವು ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧವೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ರೈಲ್ವೆ ದರವನ್ನು ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಬಾರೀ ಹೊರೆ ಹೊರಿಸಿದೆ. ಆದರೆ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದ ಬಿಜೆಪಿ ನಾಯಕರಿಗೆ ಕೇಂದ್ರದ ವೈಫಲ್ಯಗಳನ್ನು ಪ್ರಶ್ನಿಸುವ ಧೈರ್ಯವಿಲ್ಲ. ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದರೂ ಮೌನವಾಗಿದ್ದಾರೆ. ಆದರೆ, ರಾಜ್ಯ ಸರ್ಕಾರ ಏನೇ ಮಾಡಿದರೂ ಅದರ ವಿರುದ್ಧ ಮಾತನಾಡಲು ಮಾತ್ರ ಮುಂದೆ ಬರುತ್ತಾರೆ. ಬರೀ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದೇ ಇವರ ಕಾಯಕವಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ದಾವಣಗೆರೆಯಲ್ಲಿ ಸಿಎಂ ಗುಡುಗಿದರು.








