ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮಾಸುವ ಮುನ್ನವೇ ನಡೆದ ಸರಣಿ ಕೊಲೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿವೆ. ಅದರಲ್ಲೂ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಆರೋಪಗಳ ಸುರಿಮಳೆಗೈದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಮೌನಕ್ಕೆ ಪ್ರತಾಪ್ ಸಿಂಹ ಆಕ್ರೋಶ
ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, “ವಿಶ್ವ ವಿಖ್ಯಾತ ದಸರಾ ಮುಗಿದ ಬೆನ್ನಲ್ಲೇ ಮೈಸೂರಿನಲ್ಲಿ ಎರಡು ಕೊಲೆಗಳಾಗಿವೆ. ಅದರಲ್ಲೂ ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಇಷ್ಟೊಂದು ಘೋರ ಘಟನೆ ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಲಿ ತುಟಿ ಬಿಚ್ಚುತ್ತಿಲ್ಲ. ಈ ಕಾಂಗ್ರೆಸ್ ಸರ್ಕಾರದಲ್ಲಿ ಬರೀ ಕೂಗುಮಾರಿಗಳೇ ತುಂಬಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ, ಅಮೆರಿಕ ಅಧ್ಯಕ್ಷರ ಬಗ್ಗೆಯೆಲ್ಲಾ ಮಾತನಾಡುವ ಇವರಿಗೆ, ತಮ್ಮ ತವರು ಜಿಲ್ಲೆಯಲ್ಲೇ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ಮಾತನಾಡಲು ಸಮಯವಿಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯರದ್ದು ಕಲ್ಲಿನ ಹೃದಯ, ಅಂತಃಕರಣವೇ ಇಲ್ಲ
ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಟೀಕಿಸಿದ ಅವರು, “ನಮ್ಮ ರಾಜ್ಯದ ಪೊಲೀಸರು ದಕ್ಷರಿದ್ದಾರೆ, ಅವರಿಗೆ ಕೆಲಸ ಮಾಡುವ ಮನಸ್ಸಿದೆ. ಆದರೆ ಈ ಸರ್ಕಾರ ಅವರಿಗೆ ಮುಕ್ತ ವಾತಾವರಣವನ್ನೇ ನೀಡುತ್ತಿಲ್ಲ. ಮುಖ್ಯಮಂತ್ರಿಗಳು ಹೋಟೆಲ್‌ನಲ್ಲಿ ದೋಸೆ ತಿನ್ನುವಾಗ, ಕಾಫಿ ಕುಡಿಯುವಾಗ ಭದ್ರತೆಗೆ ಪೊಲೀಸರನ್ನು ಬಳಸಿಕೊಳ್ಳುತ್ತಾರೆ. ಆದರೆ ಜನರಿಗೆ ಭದ್ರತೆ ನೀಡುವಲ್ಲಿ ವಿಫಲರಾಗಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರಿಗೆ ಸಂವಿಧಾನದ ಪೀಠಿಕೆ ಓದಿಸುವುದನ್ನು ಬಿಟ್ಟರೆ ಈ ಸರ್ಕಾರ ಬೇರೇನೂ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೃದಯ ಕಲ್ಲಾಗಿದೆ, ಅವರಿಗೆ ಜನರ ನೋವಿಗೆ ಸ್ಪಂದಿಸುವ ಅಂತಃಕರಣವೇ ಇಲ್ಲವಾಗಿದೆ,” ಎಂದು ಕಿಡಿಕಾರಿದರು.
“ಮುಖ್ಯಮಂತ್ರಿಗಳೇ, ನಿಮಗೆ ಹೆಣ್ಣುಮಕ್ಕಳು ಇಲ್ಲದಿರಬಹುದು, ಆದರೆ ನಿಮ್ಮ ಮನೆಯಲ್ಲಿ ಬೇರೆ ಹೆಣ್ಣುಮಕ್ಕಳಿಲ್ಲವೇ? ಅವರ ನೋವು ನಿಮಗೆ ಅರ್ಥವಾಗುವುದಿಲ್ಲವೇ? ಮೊದಲು ಮೈಸೂರಿನ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಬಗ್ಗೆ ಮಾತನಾಡಿ,” ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.
ಯತೀಂದ್ರ ‘ವರ್ಗಾವಣೆ ಸಚಿವ’: ಗಂಭೀರ ಆರೋಪ
ಇದೇ ವೇಳೆ, ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್ ಸಿಂಹ, “ಮೈಸೂರು ಪೊಲೀಸರಿಗೆ ಯತೀಂದ್ರ ಸಿದ್ದರಾಮಯ್ಯ ಅವರ ಕಾಟ ಮಿತಿಮೀರಿದೆ. ಅವರು ಒಬ್ಬ ‘ವರ್ಗಾವಣೆ ಸಚಿವ’ರಂತೆ ವರ್ತಿಸುತ್ತಿದ್ದಾರೆ. ಯಾವುದೇ ಪೊಲೀಸ್ ಅಧಿಕಾರಿಯ ವರ್ಗಾವಣೆ ಆಗಬೇಕೆಂದರೆ ಯತೀಂದ್ರ ಅವರಿಗೆ ‘ತೆರಿಗೆ’ ಕಟ್ಟಲೇಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಸ್ಫೋಟಕ ಹೇಳಿಕೆ ನೀಡಿದರು.
“ಮೈಸೂರಿನಲ್ಲಿ ಅಕ್ರಮ ಇಸ್ಪೀಟ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಅದರ ಮೇಲೆ ದಾಳಿ ಮಾಡಲು ಪೊಲೀಸರು ಹೆದರುತ್ತಿದ್ದಾರೆ. ದಾಳಿ ಮಾಡಿದರೆ ಯಾವ ಶಾಸಕನ, ಯಾವ ಸಚಿವನ ಫೋನ್ ಬರುತ್ತದೋ ಎಂಬ ಭಯ ಪೊಲೀಸರನ್ನು ಕಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ,” ಎಂದು ಆರೋಪಿಸಿದರು.
ಕಲೆಕ್ಷನ್‌ಗಾಗಿ ಡಿಕೆಶಿ-ಸಿದ್ದರಾಮಯ್ಯ ಪೈಪೋಟಿ
ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮುಂದುವರಿಸಿದ ಅವರು, “ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ‘ಕಲೆಕ್ಷನ್’ ವಿಚಾರವಾಗಿ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರಿಗೆ ಯಾರು ಹೆಚ್ಚು ಹಣ ಕೊಡುತ್ತಾರೆ ಎಂಬ ಸ್ಪರ್ಧೆ ಇವರ ನಡುವೆ ಶುರುವಾಗಿದೆ. ಈ ಕಲೆಕ್ಷನ್ ದಂಧೆಯಿಂದಾಗಿ ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ,” ಎಂದು ಪ್ರತಾಪ್ ಸಿಂಹ ದೂರಿದರು.
ಮೈಸೂರಿನಲ್ಲಿ ನಡೆದ ಕೊಲೆ ಪ್ರಕರಣಗಳು ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರತಾಪ್ ಸಿಂಹ ಅವರ ಈ ಆರೋಪಗಳು ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿವೆ.








