ಮೈಸೂರು: ಸಿದ್ದರಾಮಯ್ಯ(Siddaramaiah) ಅವರೇ ಲೋಕಸಭೆ ಚುನಾವಣೆಯ (LokSabha Elections) ನಂತರವೂ 5 ವರ್ಷಗಳ ಕಾಲ ಸಿಎಂ ಆಗಿ ಇರಲಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.
ಮೈಸೂರಿನ ಸುತ್ತೂರು ಶ್ರೀಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ 5 ವರ್ಷ ಪೂರ್ಣಾವಧಿ ಸಿಎಂ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಧಿಕಾರ ಹಂಚಿಕೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ನಂತರವೂ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಮಾಡುವ ಕುರಿತು ಎಐಸಿಸಿ ಮಟ್ಟದಲ್ಲಿ ಚರ್ಚೆ ಆಗಿಲ್ಲ. ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷ ಸಿಎಂ ಆಗಿರಲಿದ್ದಾರೆ. ಈ ಕುರಿತು ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಅವಧಿಯಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಎಲ್ಲ ಹಗರಣಗಳ ಕುರಿತು ತನಿಖೆ ನಡೆಸುತ್ತೇವೆ. ಪಿಎಸ್ಐ ಹಗರಣ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.