ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ಒಂದು ಬಣದ ವಾದ ಮತ್ತು ಅಧಿಕಾರ ಹಂಚಿಕೆ ಸೂತ್ರದಂತೆ ಬದಲಾವಣೆ ಆಗಬೇಕು ಎಂಬ ಇನ್ನೊಂದು ಬಣದ ಪಟ್ಟುಗಳ ನಡುವೆ, ಇದೀಗ ಹೊಸದೊಂದು ವಾಕ್ಸಮರಕ್ಕೆ ವೇದಿಕೆ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ “ಸಿದ್ದರಾಮಯ್ಯ ಅನಿವಾರ್ಯ” ಎಂಬ ಹೇಳಿಕೆ, ಸ್ವತಃ ಸಚಿವ ಸಂಪುಟದ ಹಿರಿಯ ಸದಸ್ಯ ಎಚ್.ಸಿ. ಮಹದೇವಪ್ಪ ಅವರಿಂದಲೇ ತೀವ್ರ ವಿರೋಧಕ್ಕೆ ಗುರಿಯಾಗಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತೊಮ್ಮೆ ಬೀದಿಗೆ ಬಂದಿದೆ.
ಸಿದ್ದರಾಮಯ್ಯ ಅನಿವಾರ್ಯ ಎಂದ ಯತೀಂದ್ರ
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, “ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ರಾಜ್ಯಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ” ಎಂದು ಪ್ರತಿಪಾದಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
“ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರ ಅಭಿಪ್ರಾಯ ಇದೇ ಆಗಿದೆ. ಹಲವು ಸಚಿವರು ಹಾಗೂ ಶಾಸಕರು ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಹೀಗಾಗಿ ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ,” ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಯತೀಂದ್ರ, “ಸಿಎಂ ಬದಲಾವಣೆ ಕುರಿತು ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಈ ವಿಚಾರ ನನಗಾಗಲಿ, ತಂದೆಯವರಿಗಾಗಲಿ ತಿಳಿದಿಲ್ಲ. ಅಂತಿಮವಾಗಿ ಯಾರೇ ಸಿಎಂ ಆಗಬೇಕಾದರೂ ಹೈಕಮಾಂಡ್ ಒಪ್ಪಿಗೆ ಬೇಕು. ಸಿದ್ದರಾಮಯ್ಯ ಮುಂದುವರಿಯುವುದಕ್ಕೂ ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಹೇಳಿದರು.
ಇದೇ ವೇಳೆ, ಕೆ.ಎಚ್. ಮುನಿಯಪ್ಪ ಅವರ ಸಿಎಂ ಆಗುವ ಆಕಾಂಕ್ಷೆ ಕುರಿತು ಪ್ರತಿಕ್ರಿಯಿಸಿ, “ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಅವರೆಲ್ಲರಿಗೂ ಸಿಎಂ ಆಗುವ ಆಸೆ ಇರುವುದು ಸಹಜ. ಅದನ್ನು ತಪ್ಪು ಎನ್ನಲಾಗದು,” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ಯತೀಂದ್ರ ಅವರ ಹೇಳಿಕೆ ಹೊರಬೀಳುತ್ತಿದ್ದಂತೆ, ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವರು ಸಮಾಜ ಕಲ್ಯಾಣ ಸಚಿವ ಹಾಗೂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಚ್.ಸಿ. ಮಹದೇವಪ್ಪ. ಯತೀಂದ್ರ ಅವರ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ಹೊಗಳುಭಟ್ಟತನವನ್ನು ತೀವ್ರವಾಗಿ ಖಂಡಿಸಿದರು.
“ಪ್ರಜಾಪ್ರಭುತ್ವದಲ್ಲಿ ಯಾರೂ ಯಾರಿಗೂ ಅನಿವಾರ್ಯವಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಎಂಬುದೆಲ್ಲಾ ಅಂಧಾಭಿಮಾನದ ಮಾತು. ಜನಸಾಮಾನ್ಯರೇ ಪ್ರಜಾಪ್ರಭುತ್ವದ ಆಧಾರಸ್ತಂಭ. ಪಕ್ಷವನ್ನು ಎಲ್ಲರೂ ಸೇರಿ ಕಟ್ಟುತ್ತಾರೆ, ಒಬ್ಬರಿಂದ ಪಕ್ಷ ನಡೆಯುವುದಿಲ್ಲ. ಇಂತಹ ಹೊಗಳುಭಟ್ಟತನವೇ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ,” ಎಂದು ಮಹದೇವಪ್ಪ ನೇರವಾಗಿಯೇ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ ಅವರು, “ಸಿಎಂ ಬದಲಾವಣೆ ಬಗ್ಗೆ ನಡೆಯುವುದೆಲ್ಲಾ ಕೇವಲ ಅಂತೆಕಂತೆಗಳಷ್ಟೇ. ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದರೆ, ಅದು ಯಾವಾಗಲೋ ಜಾರಿಗೆ ಬರುತ್ತಿತ್ತು. ಅದಕ್ಕೆ ರೆಕ್ಕೆಪುಕ್ಕ ಕಟ್ಟುವ ಪ್ರಯತ್ನ ನಡೆದಿದೆ, ಆದರೆ ಅದು ಸಾಧ್ಯವಾಗುತ್ತಿಲ್ಲ,” ಎಂದು ವ್ಯಂಗ್ಯವಾಡಿದರು.
ದಲಿತ ಸಮುದಾಯದಿಂದ ಮುಖ್ಯಮಂತ್ರಿ ಆಗಬೇಕೆಂಬ ಕೂಗಿನ ಬಗ್ಗೆ ಮಾತನಾಡಿದ ಮಹದೇವಪ್ಪ, “ಸಮುದಾಯಗಳು ತಮಗೆ ಅವಕಾಶ ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಜಾತಿಗಿಂತ ಸಾಮರ್ಥ್ಯಕ್ಕೆ ಬೆಲೆ ನೀಡಲಾಗುತ್ತದೆ. ರಾಜ್ಯವನ್ನು ಮುನ್ನಡೆಸುವ ಶಕ್ತಿ, ಆಡಳಿತದ ಅನುಭವ ಇದ್ದವರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ. ಸಂದರ್ಭ ಬಂದಾಗ ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ,” ಎಂದು ಹೇಳಿದರು.
ಒಂದೆಡೆ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯ ನಾಯಕತ್ವವನ್ನು “ಅನಿವಾರ್ಯ” ಎಂದು ಬಿಂಬಿಸುವ ಮೂಲಕ ಅವರ ಮುಂದುವರಿಕೆಗೆ ಒತ್ತಡ ಹೇರುತ್ತಿದ್ದರೆ, ಇನ್ನೊಂದೆಡೆ ಎಚ್.ಸಿ. ಮಹದೇವಪ್ಪರಂತಹ ಹಿರಿಯ ನಾಯಕರು “ಯಾರೂ ಅನಿವಾರ್ಯರಲ್ಲ” ಎನ್ನುವ ಮೂಲಕ ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದಾರೆ. ಈ ಹೇಳಿಕೆಗಳ ಸಮರವು ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರಕ್ಕಾಗಿ ನಡೆಯುತ್ತಿರುವ ಆಂತರಿಕ ತಿಕ್ಕಾಟವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ರಾಜ್ಯ ರಾಜಕಾರಣದ ಮುಂದಿನ ದಿಕ್ಕು ನಿರ್ಧಾರವಾಗಲಿದೆ.








