ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಮಧ್ಯೆ ಮಾತಿನ ಚಕಮಕಿ ಮುಂದುವರೆದಿದೆ.
ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮಾಡಿದ ಟೀಕೆಗೆ ಸರಣಿ ಟ್ವಿಟ್ ಮೂಲಕ ಜೆಡಿಎಸ್ ಆಕ್ರೋಶ ಹೊರ ಹಾಕಿದೆ. ಸಿದ್ದರಾಮಯ್ಯ ಸೊಕ್ಕಿನ ಮನುಷ್ಯ. ನಿಮಗೆ ಏಣಿಯಾಗಿ, ಹೆಗಲಾಗಿದ್ದ ಗೌಡರ ಬೆನ್ನಿಗಿರಿದ ‘ಅಪರ ಬ್ರೂಟಸ್’ ನೀವು. ಜೆಡಿಎಸ್ ಪಕ್ಷ ಅಂತ್ಯ ಕಾಣಿಸಲು ನೀವು ಆಡುತ್ತಿರುವ ‘ಸಿದ್ದಾರಮೆ ಆಟ’ ಯಾರಿಗೆ ಗೊತ್ತಿಲ್ಲ? ಕರ್ನಾಟಕದ ಸೊಕ್ಕಿನ ಮನುಷ್ಯ ಎಂದು ಜೆಡಿಎಸ್ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಗೌಡರು ಹೇಳಿದ್ದರಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ, ಹೌದು. ದೇಶವನ್ನು ಜಾತಿ, ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇ ಪುಟದಲ್ಲಿ ಏದುಸಿರು ಬಿಡುತ್ತಿದೆ ಎಂದು ಸೊಕ್ಕಿನ ಮನುಷ್ಯಕ್ಕೆ ಟ್ಯಾಗ್ ಮಾಡಿದೆ.
ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ. ಅವರ ಹಸ್ತ ಅಭಯ ಹಸ್ತ. ಅದು ಆಶೀರ್ವಾದ,ಅನುಗ್ರಹದ ದ್ಯೋತಕ. ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ? ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೆ ಸಿದ್ದರಾಮಯ್ಯನವರೇ? ಜಾತ್ಯತೀತತೆ ನೀವಷ್ಟೇ ಹೇಳಬೇಕು ಸಿದ್ದರಾಮಯ್ಯನವರೇ? ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಭಿಪ್ರಾಯ, ಭಿನ್ನಾಭಿಪ್ರಾಯ, ಪ್ರಾಮಾಣಿಕತೆ, ಜಾತ್ಯತೀತತೆ. ಈ ಪದಗಳೆಲ್ಲ ನಿಮಗೆ ಆಗಿ ಬರಲ್ಲ. ನಿಮ್ಮದೇನಿದ್ದರೂ ಏಕಾಭಿಪ್ರಾಯ. ಸರ್ವಾಧಿಕಾರ ಧೋರಣೆ, ತುಘಲಕ್ ಮನಃಸ್ಥಿತಿ ಎಂದು ಆಕ್ರೋಶ ವ್ಯಕ್ತ ಮಾತುಗಳನ್ನು ಹಾಕಲಾಗಿದೆ.








