ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ : ನನಗೆ ಸಂಬಂಧವಿಲ್ಲ ಎಂದ ಸಿದ್ದು
ಮೈಸೂರು : ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ಪ್ರತ್ಯೇಕವಾದ ವ್ಯವಸ್ಥೆ. ಚುನಾವಣೆ ನಡೆದ ಮೇಲೆ ನೇಮಕಾತಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕ ಗೊಂದಲ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯಲ್ಲಿ ನನ್ನದಾಗಲಿ ಅಥವಾ ಡಿ.ಕೆ ಶಿವಕುಮಾರ್ ಅವರದ್ದಾಗಲಿ ಪಾತ್ರ ಮಾತ್ರ ಇರುವುದಿಲ್ಲ. ಅದು ಪ್ರತ್ಯೇಕ ಚುನಾವಣೆ ಮೇಲೆ ನಡೆಯುತ್ತದೆ. ಅದಕ್ಕೂ ನನಗೂ ಸಂಬಂಧವಿಲ್ಲ. ಅದು ಪ್ರತ್ಯೇಕವಾದ ವ್ಯವಸ್ಥೆ. ಚುನಾವಣೆ ನಡೆದ ಮೇಲೆ ನೇಮಕಾತಿಯಾಗಿದೆ. ಹೊಂದಾಣಿಕೆಯಿಂದ ಒಬ್ಬರ ನೇಮಕಾತಿಯಾಗಿದೆ. ಇದರ ಬಗ್ಗೆ ನಾನು ಸಲಹೆ ಕೊಟ್ಟಿದ್ದೆ. ಇದರಲ್ಲಿ ನನ್ನದಾಗಲಿ, ಡಿ.ಕೆ.ಶಿವಕುಮಾರ್ ಅವರದ್ದಾಗಲಿ ಪಾತ್ರ ಇರುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಲೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಮಾತನಾಡಿ, ಪಿಯುಸಿ ಪರೀಕ್ಷೆಯನ್ನು ರದ್ದುಮಾಡಿದ್ದಾರೆ. ಆದರೆ, ಎಸ್ಸೆಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಮನ್ವಯತೆ ಇಲ್ಲ. ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕ ಘೋಷಣೆ ಮಾಡಿರುವುದು ನನಗೆ ಗೊತ್ತೇ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿರುವುದೇ ಇದಕ್ಕೆ ಸಾಕ್ಷಿ ಎಂದರು.
ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ಸಚಿವ ಸುಧಾಕರ್ ನಮ್ಮಲ್ಲಿ ಲಸಿಕೆ ದಾಸ್ತಾನು ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಇದ್ದರೆ ಜನ ಯಾಕೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.