“ಕಾಂಗ್ರೆಸ್ ಗೆ ಒಂದು ತಿಂಗಳಲ್ಲಿ ಸಿದ್ದರಾಮಯ್ಯ ರಾಜೀನಾಮೆ”
ಮಸ್ಕಿ : ಮಾಜಿ ಸಿಎಂ ಸಿದ್ದರಾಮಯ್ಯ ಒಂದು ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಶನಿವಾರ ಮಸ್ಕಿ ಪಟ್ಟಣದಲ್ಲಿ ಬಿಜೆಪಿ ಬೃಹತ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿತ್ತು. ಇದರಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನ ಉದ್ದೇಶಿ ಮಾತನಾಡಿದ ಕಟೀಲ್, ಕಾಂಗ್ರೆಸ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಒಳಜಗಳದ ಪಕ್ಷವಾಗಿದೆ. ಎಲ್ಲಿಯೂ ನಿಲ್ಲದ ಸಿದ್ದರಾಮಯ್ಯ ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು.
ಇದೀಗ ಕಾಂಗ್ರೆಸ್ ನಲ್ಲಿ ತನ್ನ ಅಸ್ವಿತ್ವ ಕಳೆದುಕೊಳ್ಳುತ್ತಿದ್ದು, ಅದಕ್ಕಾಗಿ ತಿಂಗಳಲ್ಲಿ ಪಕ್ಷ ಬಿಡಲಿದ್ದಾರೆ. ಅದಕ್ಕಾಗಿ ಅವರು 90 ಜೊತೆ ಬಟ್ಟೆ ಹೊಲಿಸಿಕೊಂಡಿದ್ದಾರೆ ಎಂದು ಕಟೀಲ್ ವ್ಯಂಗ್ಯವಾಡಿದರು.
ಇದೇ ವೇಳೆ ಉಪಚುನಾವಣೆ ಬಗ್ಗೆ ಮಾತನಾಡಿ, ಉಪಕದನದಲ್ಲಿ ಸಿಎಂ ಯಡಿಯೂರಪ್ಪ ಕೃಷ್ಣರಂತೆ ಸಾರಥಿಯಾಗಿದ್ದಾರೆ. ವಿಜಯೇಂದ್ರ ಅರ್ಜುನರಾಗಿದ್ದರೇ ಶ್ರೀರಾಮುಲು ಭೀಮರಾಗಿದ್ದು, ಎನ್.ರವಿಕುಮಾರ ಸಹದೇವರಾಗಿದ್ದಾರೆ.
ಈ ಕುರುಕ್ಷೇತ್ರದಲ್ಲಿ ಪಾಂಡವರಿಗೆ ಗೆಲುವು ಖಚಿತ ಎಂದು ತಮ್ಮ ಗೆಲುವು ಖಚಿತ ಎಂದು ವಿಶ್ವಾಸದ ಮಾತುಗಳನ್ನಾಡಿದರು.