ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊಮ್ಮಗ ಧವನ್ ರಾಕೇಶ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ಸುದೀರ್ಘ ಕನ್ನಡ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಾತನ ರಾಜಕೀಯ ಉತ್ತರಾಧಿಕಾರಿಯಾಗಿ ಬಿಂಬಿತವಾಗುತ್ತಿರುವ ಧವನ್ ಅವರ ಕನ್ನಡ ಪ್ರೇಮವನ್ನು ಕೆಲವರು ಶ್ಲಾಘಿಸಿದರೆ, ಇನ್ನು ಹಲವರು ಅವರ ಕನ್ನಡ ಜ್ಞಾನವನ್ನೇ ಪ್ರಶ್ನಿಸಿ ಟ್ರೋಲ್ ಮಾಡಿದ್ದಾರೆ.
ರಾಜಕೀಯ ಅಂಗಳಕ್ಕೆ ಮೊಮ್ಮಗನ ಎಂಟ್ರಿ?
ತಮ್ಮ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯ ಅವರ ಅಕಾಲಿಕ ನಿಧನದ ನಂತರ, ಸಿದ್ದರಾಮಯ್ಯನವರು ತಮ್ಮ ಮೊಮ್ಮಗ ಧವನ್ ರಾಕೇಶ್ ಅವರನ್ನು ರಾಜಕೀಯಕ್ಕೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಇತ್ತೀಚೆಗೆ ಹಲವು ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ತಾತನ ಜೊತೆ ಕಾಣಿಸಿಕೊಳ್ಳುತ್ತಿರುವ ಧವನ್, ಇದೀಗ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗುವ ಸ್ಪಷ್ಟ ಸೂಚನೆ ನೀಡಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಧವನ್ ಮೆಚ್ಚುಗೆಯ ಮಾತು
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಧವನ್, ರಾಹುಲ್ ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ್ದಾರೆ. “ನಮ್ಮ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸದಾವಕಾಶ ನನಗೆ ದೊರೆಯಿತು. ಪ್ರಾಮಾಣಿಕ ನಾಯಕರನ್ನು ನಾನು ಎಷ್ಟು ಗೌರವಿಸುತ್ತೇನೆ ಎಂಬುದನ್ನು ನನ್ನ ತಾತ ಗುರುತಿಸಿದ್ದರಿಂದ ಇದು ಸಾಧ್ಯವಾಯಿತು,” ಎಂದು ಪೋಸ್ಟ್ ಆರಂಭಿಸಿದ್ದಾರೆ.
ಮುಂದುವರೆದು, “ನಿರಂತರ ವಿರೋಧದ ನಡುವೆಯೂ ತನ್ನ ನಂಬಿಕೆ ಹಾಗೂ ಸಿದ್ಧಾಂತದ ಪರ ನಿಲ್ಲುವ ರಾಹುಲ್ ಗಾಂಧಿಯವರಂತಹ ನಾಯಕನನ್ನು ಭೇಟಿಯಾಗಿದ್ದು ವಿಭಿನ್ನ ಅನುಭವ. ವಿದ್ಯಾರ್ಥಿಯಾಗಿ ಮತ್ತು ಮುಂದೆ ವಕೀಲನಾಗಿ ನಾನು ಅವರ ಜೊತೆ ನಿಲ್ಲಲು ಬಯಸುತ್ತೇನೆ. ಸತ್ಯ, ನಿಷ್ಠೆ ಹಾಗೂ ಪಾರದರ್ಶಕತೆಯ ಮೂಲಕ ದೇಶವನ್ನು ಮುನ್ನಡೆಸುವ ನಾಯಕರನ್ನು ನಾವು ಗೌರವಿಸಬೇಕಿದೆ,” ಎಂದು ಬರೆದುಕೊಂಡಿದ್ದಾರೆ.
ಕನ್ನಡ ಪೋಸ್ಟ್ ಗೆ ನೆಟ್ಟಿಗರ ಪ್ರಶ್ನೆ
ಧವನ್ ರಾಕೇಶ್ ಅವರು ಇಷ್ಟು ಸುದೀರ್ಘವಾದ, ಸುಲಲಿತವಾದ ಕನ್ನಡದಲ್ಲಿ ಬರೆದುಕೊಂಡಿರುವುದೇ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಮುಖ್ಯ ವಿಷಯವಾಗಿದೆ. ಅವರ ಕನ್ನಡ ಭಾಷೆಯ ಮೇಲಿನ ಹಿಡಿತದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅನೇಕ ನೆಟ್ಟಿಗರು, ಅವರನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ.
“ನಿಮಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ, ಇನ್ನು ಇಷ್ಟು ಶುದ್ಧವಾದ ಕನ್ನಡದಲ್ಲಿ ಹೇಗೆ ಬರೆದಿದ್ದೀರಿ?”, “ಈ ಪೋಸ್ಟ್ ಬರೆದುಕೊಟ್ಟ ಪುಣ್ಯಾತ್ಮ ಯಾರು?”, “ಗೂಗಲ್ ಟ್ರಾನ್ಸ್ಲೇಷನ್ ಸಹಾಯ ಪಡೆದಿದ್ದೀರಾ?” ಎಂದು ಕಾಮೆಂಟ್ ಗಳ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ರಾಜಕೀಯ ಪ್ರವೇಶದ ಭಾಗವಾಗಿ ರಾಷ್ಟ್ರೀಯ ನಾಯಕರನ್ನು ಭೇಟಿಯಾದ ಧವನ್ ರಾಕೇಶ್ ಅವರ ನಡೆ, ಅವರ ಕನ್ನಡ ಪೋಸ್ಟ್ ನಿಂದಾಗಿ ಬೇರೆಯದೇ ಚರ್ಚೆಯನ್ನು ಹುಟ್ಟುಹಾಕಿದೆ. ಇದು ರಾಜಕೀಯ ವಲಯದಲ್ಲಿ ವಾರಸುದಾರಿಕೆಯ ಸಂವಾದಕ್ಕೆ ಮತ್ತೊಮ್ಮೆ ದಾರಿ ಮಾಡಿಕೊಟ್ಟಿದೆ.








