ರಾಮನಗರ: ಸಿಕ್ಕಾಪಟ್ಟೆ ಕುಡಿದು ಕಾರು ಚಲಾಯಿಸಿದ ಪರಿಣಾಮ ಕಾರು ಬೇಕಾಬಿಟ್ಟಿಯಾಗಿ ಹೋಗಿ, ಪಲ್ಟಿಯಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ತಾಲೂಕಿನ ದೊಡ್ಡಗಂಗವಾಡಿ ಗ್ರಾಮದ ಹತ್ತಿರ ನಡೆದಿದೆ. ಕೂಡಲೇ ಕಾರಿನಿಂದ ಕೆಳಗೆ ಇಳಿದ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಮೂಲದ ರೋಹಿತ್, ತರುಣ್, ಮಂಜು ಬಚಾವಾದ ಯುವಕರು ಎನ್ನಲಾಗಿದೆ.
ಈ ಯುವಕರು ಸಿಕ್ಕಾಪಟ್ಟೆ ಕುಡಿದು, ಕಾರು ಚಲಾಯಿಸುತ್ತ ಗ್ರಾಮದೊಳಗೆ ಹೇಗೆ ಬೇಕೋ ಹಾಕಿ ನುಗ್ಗಿದ್ದಾರೆ.
ವ್ಯಕ್ತಿಯೊಬ್ಬರಿಗೆ ಗುದ್ದಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಯುವಕರನ್ನು ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯುವಕರನ್ನು ವಶಕ್ಕೆ ಪಡೆಯಲಾಗಿದೆ.