ಸಿಕ್ಕಿಂನಲ್ಲಿ (Sikkim) ಏಕಾಏಕಿ ಸಂಭವಿಸಿರುವ ಪ್ರವಾಹಕ್ಕೆ ಇಲ್ಲಿಯವರೆಗೆ 14 ಜನ ಬಲಿಯಾಗಿದ್ದು, 102 ಜನ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ತಿಳಿಸಿದೆ. ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ 3 ಸಾವಿರ ಪ್ರವಾಸಿಗರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ.
ಸಿಕ್ಕಿಂನಲ್ಲಿರುವ ಸೌತ್ ಲೊನಾಕ್ ಸರೋವರದಲ್ಲಿ ಬುಧವಾರ ಬೆಳಗ್ಗೆ ಸುರಿದ ನಿರಂತರ ಮಳೆಯಿಂದಾಗಿ ಮೇಘಸ್ಫೋಟ (Cloudburst) ಸಂಭವಿಸಿದೆ. ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದಾಗಿ ಸಿಂಗ್ಟಾಮ್ ಪಟ್ಟಣದ ತೀಸ್ತಾ ನದಿಯ ಇಂದ್ರೇಣಿ ಸೇತುವೆ ಮೂಲಕ ಪ್ರವಾಹ ಸಾಗಿದೆ. ಅಲ್ಲದೇ, ಮತ್ತೊಂದು ಸೇತುವೆ ಕುಸಿದಿದೆ.
ಚುಂಗ್‌ಥಾಂಗ್‌ನ ತೀಸ್ತಾ ಸ್ಟೇಜ್ 3 ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 14 ಕಾರ್ಮಿಕರು ಅಲ್ಲಿನ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಮಂಗನ್ ಜಿಲ್ಲೆಯ ಚುಂಗ್ತಾಂಗ್ ಮತ್ತು ಗ್ಯಾಂಗ್ಟಾಕ್ ಜಿಲ್ಲೆಯ ಡಿಕ್ಚು, ಸಿಂಗ್ಟಾಮ್ ಮತ್ತು ಪಾಕ್ಯೊಂಗ್ ಜಿಲ್ಲೆಯ ರಂಗ್ಪೋದಿಂದ ಹಲವರು ನಾಪತ್ತೆಯಾಗಿದ್ದು, ಹಲವರಿಗೆ ಗಾಯಗಳಾಗಿವೆ. ಅಲ್ಲದೇ, ರಾಜ್ಯಾದ್ಯಂತ 26 ಜನರು ಗಾಯಗೊಂಡಿದ್ದಾರೆ. ಬರ್ದಂಗ್‌ನಲ್ಲಿ 23 ಸೇನಾ ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅವರು ಬೆಂಗಾವಲು ವಾಹನ ಪ್ರವಾಹದ ಕೆಸರಿನಲ್ಲಿ ಮುಳುಗಿದೆ.