ಒಗ್ಗರಣೆ ದೋಸೆ ರುಚಿಕರ, ಪೋಷಕತೆ ತುಂಬಿದ, ತಕ್ಷಣವೇ ತಯಾರಿಸಬಹುದಾದ ಸುಲಭವಾದ ತಿಂಡಿ. ಈ ದೋಸೆಯನ್ನು ಕಡಿಮೆ ಸಾಮಗ್ರಿಗಳನ್ನು ಬಳಸಿ ಮಾಡಬಹುದಾಗಿದ್ದು, ದಿನನಿತ್ಯದ ಉಪಯೋಗಕ್ಕೆ ಸೂಕ್ತವಾಗಿದೆ.
ಬೇಕಾಗುವ ಸಾಮಗ್ರಿಗಳು:
1 ಕಪ್ ಅಕ್ಕಿ ಹಿಟ್ಟು
ಉಪ್ಪು (ರುಚಿಗೆ ತಕ್ಕಂತೆ)
ನೀರು
1 ಚಮಚ ಸಾಸಿವೆ
1 ಚಮಚ ಜೀರಿಗೆ
1-2 ಹಸಿಮೆಣಸು (ಚಿಕ್ಕದಾಗಿ ಕತ್ತರಿಸಿದ್ದು) ಅಥವಾ 1 ಒಣ ಮೆಣಸಿನಕಾಯಿ
1-2 ಟೇಬಲ್ ಸ್ಪೂನ್ ಕರಿಬೇವಿನ ಸೊಪ್ಪು (ಹೆಚ್ಚಿದ)
1-2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು (ಹೆಚ್ಚಿದ)
1 ಚಮಚ ಮೆಣಸಿನಕಾಳಿನ ಪುಡಿ
1-2 ಟೇಬಲ್ ಸ್ಪೂನ್ ಎಣ್ಣೆ
ತಯಾರಿಸುವ ವಿಧಾನ:
ಒಂದು ದೊಡ್ಡ ತಟ್ಟೆಗೆ 1 ಕಪ್ ಅಕ್ಕಿ ಹಿಟ್ಟನ್ನು ಹಾಕಿ. ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ.
ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ, ಗಂಟಿಲ್ಲದಂತೆ ಕಲೆಸಿ ಇಟ್ಟುಕೊಳ್ಳಿ. ದೋಸೆಯ ಹದಕ್ಕೆ ಬರಬೇಕು.
ಈ ಹಿಟ್ಟನ್ನು 10-15 ನಿಮಿಷ ಹಾಗೆಯೇ ಇಡಿ. ಹೀಗೆ ಇಡುವುದರಿಂದ ದೋಸೆಗೆ ಸುವಾಸನೆ ಮತ್ತು ರುಚಿ ಹೆಚ್ಚುತ್ತದೆ.
ಬಾಣಲೆಗೆ, 1-2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ, 1 ಚಮಚ ಸಾಸಿವೆ ಹಾಕಿ.
ಸಾಸಿವೆ ಸಿಡಿಯಲು ಆರಂಭವಾದ ನಂತರ, 1 ಚಮಚ ಜೀರಿಗೆ ಸೇರಿಸಿ.
ನಂತರ, ಸಣ್ಣಗೆ ಮುರಿದ 1-2 ಹಸಿಮೆಣಸು ಅಥವಾ ಒಣ ಮೆಣಸಿನಕಾಯಿ ಸೇರಿಸಿ.
ಕೊನೆಗೆ, 1-2 ಟೇಬಲ್ ಸ್ಪೂನ್ ಕರಿಬೇವಿನ ಸೊಪ್ಪು ಸೇರಿಸಿ, ಚೆನ್ನಾಗಿ ಬೆರೆಸಿ.
ತಯಾರಿಸಿದ ಈ ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ ಚೆನ್ನಾಗಿ ಕಲೆಸಿ.
ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು 1 ಚಮಚ ಮೆಣಸಿನಕಾಳಿನ ಪುಡಿಯನ್ನು ಸೇರಿಸಿ.
ಇನ್ನಷ್ಟು ನೀರು ಹಾಕಿ, ಹಿಟ್ಟನ್ನು ನೀರ್ ದೋಸೆ ಹದಕ್ಕೆ ತಂದುಕೊಳ್ಳಿ.
ಬಿಸಿಯಾದ ಕಾವಲಿಯ ಮೇಲೆ ನೀರ್ ದೋಸೆ ತರ ಹಿಟ್ಟನ್ನು ತೆಳ್ಳಗೆ ಹರಡಿ, ದೋಸೆಯ ಒಂದೇ ಬದಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿದರೆ ಒಗ್ಗರಣೆ ದೋಸೆ ಸವಿಯಲು ಸಿದ್ದ.
ಒಗ್ಗರಣೆ ದೋಸೆಯನ್ನು ನಿಮ್ಮ ಇಷ್ಟದ ಚಟ್ನಿ, ಬೆಲ್ಲದ ಚಟ್ನಿ, ಅಥವಾ ಎಣ್ಣೆಗೊಜ್ಜಿನೊಂದಿಗೆ ಸೇವಿಸಬಹುದು. ಇಲ್ಲವೆ, ಸ್ವಲ್ಪ ನುಗ್ಗೆಕಾಯಿ ಸಾಂಬಾರು ಜೊತೆ ಅತ್ಯುತ್ತಮ ಕಾಂಬಿನೇಷನ್!