ತೆಲಂಗಾಣ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳು ತಯಾರಿ ನಡೆಸಿವೆ. 119 ಸದಸ್ಯ ಬಲದ ವಿಧಾನಸಭೆಗೆ ಈ ವರ್ಷದ ಅಂತ್ಯದೊಳಗೆ ಚುನಾವಣೆ ನಡೆದಿದೆ.
ಬಿಆರ್ಎಸ್ ಪಕ್ಷದ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರವನ್ನು ಈ ಬಾರಿ ಕೆಡವಬೇಕೆಂದು ವಿವಿಧ ಪಕ್ಷಗಳು ತಂತ್ರ ರೂಪಿಸುತ್ತಿವೆ. ಕರ್ನಾಟಕದಲ್ಲಿ ಗೆದ್ದಿರುವ ಕಾಂಗ್ರೆಸ್ ತೆಲಂಗಾಣದಲ್ಲಿಯೂ ಗೆದ್ದು ಬೀಗಲು ಮುಂದಾಗಿದೆ.
ಸದ್ಯ ತೆಲಂಗಾಣ ವಿಧಾನಸಭೆ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. PollTracker ನಡೆಸಿರುವ ಸಮೀಕ್ಷೆಯ ವರದಿಯಂತೆ, ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ 35 ರಿಂದ 40 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಅಲ್ಲದೇ, ಈ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ.
ಸಮೀಕ್ಷೆಯ ವರದಿ ಪ್ರಕಾರ ಬಿಆರ್ಎಸ್ 35-40, ಬಿಜೆಪಿ 3-5, ಕಾಂಗ್ರೆಸ್ 63-69, ಎಐಎಂಐಎಂ 2-5 ಮತ್ತು ಇತರರು 2-6 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು 60 ಸ್ಥಾನಗಳು ಬೇಕು. ಸದ್ಯದ ಸಮೀಕ್ಷೆಯಂತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಬಿಆರ್ಎಸ್ ಪಕ್ಷ ಶೇ 34, ಬಿಜೆಪಿ ಶೇ 9, ಕಾಂಗ್ರೆಸ್ ಶೇ 42, ಎಐಎಂಐಎಂ ಶೇ 10 ಮತ್ತು ಇತರರು ಶೇ 5ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ರಾಜ್ಯ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡುತ್ತಿದೆ. ಈ ನಡುವೆ ವೈ. ಎಸ್. ಶರ್ಮಿಳಾ ನೇತೃತ್ವದ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.