ಇಬ್ಬರು ಮಕ್ಕಳನ್ನು ಪಾಪಿ ತಂದೆಯೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘನ ಘೋರ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಾಪಿ ತಂದೆ ತನ್ನ ಸ್ವಂತ ಮಕ್ಕಳನ್ನೇ ಸುತ್ತಿಗೆಯಿಂದ ಕೊಲೆ ಮಾಡಿದ್ದಾರೆ. ಘಟನೆಯಲ್ಲಿ 3 ವರ್ಷದ ಆದಿತ್ಯ ಹಾಗೂ 4 ವರ್ಷದ ಅಮೂಲ್ಯ ಕೊಲೆಯಾದ ದುರ್ದೈವಿಗಳು. ಮಕ್ಕಳನ್ನು ಕೊಲೆ ಮಾಡುವುದಲ್ಲದೇ ಪತ್ನಿಯ ಮೇಲೆಯೂ ಹಲ್ಲೆ ಮಾಡಿದ್ದಾನೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಮೈಸೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀಕಾಂತ್ ಕೊಲೆ ಮಾಡಿರುವ ಪಾಪಿ ತಂದೆ. ಮೂಲತಃ ಕಲಬುರಗಿ ಜಿಲ್ಲೆಯವನಾದ ಈತ ಆಲೆಮನಯಲ್ಲಿ ಕೆಲಸ ಮಾಡುವುದಕ್ಕಾಗಿ ಅಲ್ಲಿಂದ ಕುಟುಂಬ ಸಮೇತನಾಗಿ ಬಂದಿದ್ದ. ಅಲ್ಲದೇ, ಮಂಡ್ಯದ ಮರಳಗಾಲದಲ್ಲಿ ಕೆಲಸ ಮಾಡುತ್ತಿದ್ದ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಕೃತ್ಯ ಎಸಗಿ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








