ಹೆಗ್ಗಡದೇವನಕೋಟೆ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ 12 ವರ್ಷ ಮನೆಯೊಳಗೆ ಕೂಡಿ ಹಾಕಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈತ ಮನೆಯೊಳಗೆ ಕೂಡಿ ಹಾಕಿ ಮೂರು ಮೂರು ಬೀಗ ಹಾಕುತ್ತಿದ್ದ ಎನ್ನಲಾಗಿದ್ದು, ಈ ಘಟನೆ ಎಚ್.ಮಟಕೆರೆ ಗ್ರಾಮದಲ್ಲಿ ನಡೆದಿದೆ. ಮಲ, ಮೂತ್ರ ವಿಸರ್ಜನೆಗೂ ಮನೆಯಿಂದ ಹೊರಗೆ ಬರಲು ಆಗದೆ ಈ ಮಹಿಳೆಯು ತನ್ನ ಗಂಡ ಕೊಟ್ಟು ಹೋಗುತ್ತಿದ್ದ ಡಬ್ಬಿಯನ್ನೇ ನೈಸರ್ಗಿಕ ಕರೆಗಾಗಿ ಅವಲಂಬಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಮಹಿಳೆಯನ್ನು ರಕ್ಷಿಸಿ, ತವರು ಮನೆಗೆ ಕಳುಹಿಸಲಾಗಿದೆ.
ಎಚ್.ಮಟಕೆರೆ ಗ್ರಾಮದ ಸಣ್ಣಾಲಯ್ಯ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈತ 12 ವರ್ಷಗಳ ಹಿಂದೆ 3ನೇ ಮದುವೆಯಾಗಿದ್ದ. ಈತನಿಗೆ ಎರಡು ಮಕ್ಕಳಿದ್ದಾನೆ. ಆದರೂ ಪ್ರತಿ ದಿನ ಅನುಮಾನದಿಂದಲೇ ಪತ್ನಿಯನ್ನು ನೋಡುತ್ತಿದ್ದ. ಕಿಟಕಿಗಳನ್ನು ಹಗ್ಗದಿಂದ ಭದ್ರಗೊಳಿಸುತ್ತಿದ್ದ ಈತ ಮನೆಯ ಬಾಗಿಲಿಗೆ ಕೀಲಿ ಹಾಕಿ ಯಾರ ಸಂಪರ್ಕಕ್ಕೂ ಬಾರದಂತೆ ನೋಡಿಕೊಳ್ಳುತ್ತಿದ್ದ. ಹಗಲು ಹೊತ್ತು ಮಲಮೂತ್ರ ವಿಸರ್ಜನೆಗೆ ಆಕೆಗೆ ಡಬ್ಬಿ ಕೊಟ್ಟು ರಾತ್ರಿ ತಾನು ಮನೆಗೆ ಬಂದಾಗ ಅದನ್ನು ಹೊರಹಾಕುವ ವ್ಯವಸ್ಥೆ ಮಾಡಿಸಿಕೊಂಡಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಕೂಡ ಬೆದರಿಸಿದ್ದ ಎನ್ನಲಾಗಿದೆ.
ಹಿಂದಿನ ಇಬ್ಬರು ಪತ್ನಿಯರು ಕೂಡ ಈತನ ಇಂತಹ ಪೈಶಾಚಿಕ ಕೃತ್ಯಕ್ಕೆ ಬೇಸತ್ತು ಆತನನ್ನು ಬಿಟ್ಟಿದ್ದರು. ಆದರೆ, ಮೂರನೇ ಪತ್ನಿ ಮಾತ್ರ 12 ವರ್ಷಗಳಿಂದಲೂ ಸಹಿಸಿಕೊಳ್ಳುತ್ತಲೇ ಬಂದಿದ್ದರು ಎನ್ನಲಾಗಿದೆ. ಸುಮಾ ಎಂಬ ಮಹಿಳೆಯೇ ಈ ರೀತಿಯ ನೋವು ಅನುಭವಿಸಿದ್ದು, ಸಂಬಂಧಿಕರೊಬ್ಬರು ನೀಡಿದ ಮಾಹಿತಿ ಆಧಾರದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಜಸ್ಸಿಲ್ಲಾ, ಸಹಾಯಕ ಸಬ್ ಇನ್ಸ್ಪೆಕ್ಟರ್ ಸುಹಾನ್, ವಕೀಲ ಸಿದ್ದಪ್ಪಾಜಿ ಗ್ರಾಮಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.