ಪಾದರಾಯ ಮೂಲಕ ನಾಯಕಿಯಾದ ಗಾಯಕಿ ಮಂಗ್ಲಿ; ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ
ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್ ನಲ್ಲಿ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಪಾದರಾಯ’. ಹನುಮ ಜಯಂತಿಯಂದು ಟೈಟಲ್ ರಿವೀಲ್ ಮಾಡಿ ಸಂಚಲನ ಸೃಷ್ಟಿಸಿದ್ದ ಚಿತ್ರತಂಡ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ, ಸದ್ಯ ಲೇಟೆಸ್ಟ್ ಅಪ್ಡೇಟ್ ಒಂದು ಚಿತ್ರತಂಡದಿಂದ ಹೊರಬಿದ್ದಿದೆ. ‘ಪಾದರಾಯ’ ಚಿತ್ರದ ಮೂಲಕ ಸೆನ್ಸೇಷನಲ್ ಸಿಂಗರ್ ಮಂಗ್ಲಿ ನಾಯಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.
‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ, ಅಪಾರ ಖ್ಯಾತಿ ಗಳಿಸಿಕೊಂಡ ತೆಲುಗಿನ ಗಾಯಕಿ ಮಂಗ್ಲಿ. ಆ ನಂತರ ಕನ್ನಡದಲ್ಲೂ ಹಲವು ಹಾಡುಗಳಿಗೆ ದನಿಯಾಗಿರುವ ಮಂಗ್ಲಿ ಕನ್ನಡಿಗರ ಪ್ರೀತಿಗೂ ಪಾತ್ರರಾಗಿದ್ದಾರೆ. ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಮಂಗ್ಲಿ ಪಾದರ್ಪಣೆ ಮಾಡುತ್ತಿದ್ದಾರೆ. ಅದು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಮುಖಾಂತರ ಅನ್ನೋದು ವಿಶೇಷ. ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ‘ಪಾದರಾಯ’ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಗಾಯಕಿ, ನಿರೂಪಕಿಯಾಗಿ ಸೈ ಎನಿಸಿಕೊಂಡ ಮಂಗ್ಲಿ ನಾಯಕಿಯಾಗಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ‘ಪಾದರಾಯ’ ಚಿತ್ರದಲ್ಲಿ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರೀಕರಣಕ್ಕೆ ಹೊರಡುವ ಮುನ್ನ ನಾಯಕ ನಟ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಿದ್ದಾರೆ. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ರಿಂದ ಹನುಮ ಮಾಲೆ ಹಾಕಿಸಿಕೊಂಡಿರುವ ನಾಗಶೇಖರ್ 42 ದಿನಗಳ ಕಾಲ ಅಂಜನಾದ್ರಿ ಬೆಟ್ಟದಲ್ಲಿ ವ್ರತವನ್ನು ಆಚರಿಸುತ್ತಿದ್ದಾರೆ.
‘ಪಾದರಾಯ’ ಚಿತ್ರ 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದ್ದು, ಯೂನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರ್ತಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದ್ದು, ಸದ್ಯದಲ್ಲೇ ಚಿತ್ರದ ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.
ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ನಡಿ ಆರ್.ಚಂದ್ರು ‘ಪಾದರಾಯ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನಾಗಶೇಖರ್ ಸಹ ನಿರ್ಮಾಣವಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ತಮಿಳು ಚಿತ್ರರಂಗದ ಹೆಸರಾಂತ ಸಂಕಲನಕಾರ ಆಂಟೋನಿ ಚಿತ್ರದ ಸಂಕಲನ ಜವಾಬ್ದಾರಿ ಹೊತ್ತಿದ್ದು, ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.
Singer Mangli: Singer Mangli who is the heroine of Padaraya; Pan India movie directed by Chakraborty Chandrachud.