ಗುವಾಹಟಿ: ಮಣಿಪುರದಲ್ಲಿ (Manipur Violence) ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಇನ್ನು ಶಾಂತವಾಗುತ್ತಿಲ್ಲ. ಅಲ್ಲಿ ಜನಾಂಗೀಯ ದ್ವೇಷ ತೀವ್ರ ಉಗ್ರ ಸ್ವರೂಪ ಪಡೆದಿದೆ. ಘಟನೆಯಲ್ಲಿ ಗುಂಡೇಟು ತಿಂದಿದ್ದ 8 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ್ದು, ಬಾಲಕ, ಆತನ ಹಾಗೂ ಓರ್ವ ಸಂಬಂಧಿ ತಾಯಿ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ.
ಬಾಲಕ ಟೋನ್ಸಿಂಗ್ ಹ್ಯಾಂಗ್ಸಿಂಗ್, ಬಾಲಕನ ತಾಯಿ ಮೀನಾ ಹ್ಯಾಂಗ್ಸಿಂಗ್ ಹಾಗೂ ಅವರ ಸಂಬಂಧಿ ಲಿಡಿಯಾ ಲೌರೆಂಬಮ್ ದಹನವಾಗಿದ್ದಾರೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆ ಮೈತೇಯಿ ಜನಾಂಗಕ್ಕೆ ಸೇರಿದ್ದವರು. ಅವರ ಪತಿ ಕುಕಿ ಸಮುದಾಯದವರು. ಈ ದಂಪತಿ ತಮ್ಮ 8 ವರ್ಷದ ಮಗನೊಂದಿಗೆ ಆಸ್ಸಾಂ ರೈಫಲ್ಸ್ ಪರಿಹಾರ ಶಿಬಿರದಲ್ಲಿದ್ದರು. ಆದರೆ, ಶಿಬಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾಗ ಬಾಲಕನ ತಲೆಗೆ ಗುಂಡು ತಗುಲಿತ್ತು.
ಕೂಡಲೇ ಅಧಿಕಾರಿಗಳು ಇಂಫಾಲ್ನಲ್ಲಿ ಪೊಲೀಸರೊಂದಿಗೆ ಮಾತನಾಡಿ ಅಂಬುಲೆನ್ಸ್ ವ್ಯವಸ್ಥೆ ಮಾಡಿದರು. ತಾಯಿ ಬಹುಸಂಖ್ಯಾತ ಸಮುದಾಯದವಳಾಗಿದ್ದರಿಂದ ಬಾಲಕನನ್ನು ರಸ್ತೆಯ ಮೂಲಕ ಇಂಫಾಲ್ನಲ್ಲಿರುವ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ, ಐಸೊಸೆಂಬಾದಲ್ಲಿ ನಾಗರಿಕರು ಅಂಬುಲೆನ್ಸ್ನ್ನು ಸುಟ್ಟು ಹಾಕಿದರು. ವಾಹನದಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.
ಮಣಿಪುರದಲ್ಲಿ ಎಸ್ಟಿ ಪಂಗಡ ಸ್ಥಾನಮಾನಕ್ಕೆ ಮೈತೇಯಿ ಸಮುದಾಯದ ಬೇಡಿಕೆ ವಿರೋಧಿಸಿ ಮೆರವಣಿಗೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಘರ್ಷಣೆ ಆರಂಭವಾಗಿತ್ತು. ಸದ್ಯ ರಾಜ್ಯದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿದೆ.